23/12/2024

ವಿಶ್ವ ಮಾನವ ಕುವೆಂಪು ಜನ್ಮ ದಿನಾಚರಣೆ

ಕುವೆಂಪು ತತ್ವ-ಆದರ್ಶಗಳು ಯುವ ಪೀಳಿಗೆಗೆ ದಾರಿ ದೀಪವಾಗಲಿ: ಸಾಹಿತಿ ಟಿ. ಎಸ್ ವಂಟಗೂಡಿ

ಬೆಳಗಾವಿ-29: ವಿಶ್ವ ಮಾನವ, ರಾಷ್ಟ್ರ ಕವಿ ಕುವೆಂಪು ಅವರು ಸಾಹಿತ್ಯ, ಸಂಗೀತ, ನಾಟಕ, ಕಥೆ, ಕಾದಂಬರಿ ರಚಿಸಿ ಅವುಗಳನ್ನು ವಿಶ್ವಕ್ಕೆ ಸಾರುವುದರ ಮೂಲಕ ಸಮಾಜದಲ್ಲಿ ಸಮಾನತೆಯ ಪ್ರಾಮುಖ್ಯತೆ ತೋರಿಸಿಕೊಟ್ಟ ಮಹಾನ್ ಕವಿಯಾಗಿದ್ದಾರೆ ಎಂದು ಸಾಹಿತಿ ಟಿ. ಎಸ್ ವಂಟಗೂಡಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶುಕ್ರವಾರ ರಂದು ಏರ್ಪಡಿಸಲಾಗಿದ್ದ ರಾಷ್ಟ್ರ ಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ ವಿಶ್ವ ಮಾನವ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ, ಕಥೆ, ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೆಯವಾದದ್ದು, ಅವರನ್ನು ಸಾಹಿತ್ಯದ ಮೂಲಕ ಚಿರಂಜೀವಿಯಾಗಿಸುವುದರ ಜೊತೆಗೆ ಅವರು ಹಾಕಿ ಕೊಟ್ಟ ಮಾರ್ಗದರ್ಶನ ತತ್ವ ಆದರ್ಶ, ಸಿದ್ಧಾಂತ ಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಸಾಹಿತ್ಯ ಲೋಕದ ಮೇರುಶಿಖರ ಕುವೆಂಪು:

ಮನುಜ ಮತ ವಿಶ್ವ ಪಥ ಎಂದು ಸಾರಿದ ಕುವೆಂಪು ಅವರು ನಾಡು, ನುಡಿ, ನೆಲೆ, ಜಲ ಸಂಸ್ಕೃತಿ ರಕ್ಷಣೆಗೆ ತಮ್ಮದೇ ಶೈಲಿಯಲ್ಲಿ ಭಾವ ತುಂಬಿ ಹೃದಯದಿಂದ ಸಾಹಿತ್ಯ ಕಟ್ಟಿ ಕೊಟ್ಟ ಕನ್ನಡ ಸಾಹಿತ್ಯ ಲೋಕದ ಮೇರುಶಿಖರ ಕುವೆಂಪು ಅವರು ಎಂದು ಹೇಳಿದರು.

ಕನ್ನಡ ಸಾಹಿತ್ಯ ದಲ್ಲಿ ಅವರು ಮಾಡಿದ ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ, ಕರ್ನಾಟಕ ರತ್ನ ಸೇರಿದಂತೆ ಇತರ ಪ್ರಶಸ್ತಿಗಳನ್ನು ಮೊಟ್ಟ ಮೊದಲ ಬಾರಿಗೆ ಮುಡಿಗೇರಿಸಿಕೊಂಡ ಅಗ್ರಮಾನ್ಯ ಕವಿ ಕುವೆಂಪು ಅವರು ಎಂದು ತಿಳಿಸಿದರು.

ಕುವೆಂಪು ಕನ್ನಡದ ಸೇವೆ:

ಕುವೆಂಪುರವರು ಆಂಗ್ಲರ ಶೋಷಣೆ, ದಬ್ಬಾಳಿಕೆಯನ್ನು ಎದುರಿಸುವುದರ ಜೊತೆಗೆ ಕವಿ, ಲೇಖಕ, ವಿಮರ್ಶಕ ನಾಟಕಕಾರ, ಚಿಂತಕ, ಪ್ರಾದ್ಯಾಪಕ, ಕುಲಪತಿಯಾಗಿ ಕನ್ನಡಕ್ಕೆ ಅವರು ಸಲ್ಲಿಸಿದ ಸೇವೆ ಅಪಾರವಾದದ್ದು ಎಂದು ಸಾಹಿತಿ ಟಿ. ಎಸ್ ವಂಟಗೂಡಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬೆಳಗಾವಿ ಹಿರಿಯ ಸಾಹಿತಿಗಳಾದ ಶ್ರೀರಂಗ ಜೋಶಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


error: Content is protected !!