23/12/2024
IMG-20220319-WA0128
IMG 20240310 WA0006 -
ಸಾಮಾಜಿಕ ಸೌಹಾರ್ದತೆಯ ಪ್ರತೀಕ  
ಚಾಂಗದೇವ ಮಹಾರಾಜರು
ಯಮನೂರ, ಶಿಂದಿಕುರಬೇಟ, ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಮಾರ್ಚ್‌ 29ರಂದು ಶ್ರೀ ಚಾಂಗದೇವರ ಗಂಧಾಭಿಷೇಕ, 30ರಂದು ಮುಖ್ಯ ಜಾತ್ರೆ ನಡೆಯಲಿದೆ ಈ ನಿಮಿತ್ತ ಲೇಖನ  

ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ನೋಡಿದಾಗ ಇದು ಪ್ರಾಚೀನ ಮತ್ತು ಭವ್ಯವಾದ ಆರ್ಯ, ದ್ರಾವಿಡ ಸಂಸ್ಕೃತಿಯ ಸಮ್ಮಿಳಿತವಾದ ಪರಂಪರೆ ಎಂದು ಕಂಡು ಬರುತ್ತದೆ. ಸನಾತನ ಧರ್ಮ ಬಲವಾಗಿ ಬೆಳೆಯುವದರ ಮೂಲಕ ವೇದಗಳು, ಆಗಮಗಳು, ಸುಕೃತಿಗಳು, ಪುರಾಣಗಳು ಮತ್ತು ಇನ್ನಿತರ ಮಹಾಕಾವ್ಯಗಳ ಮೂಲಕ ನಮ್ಮದೇಶ ಒಂದು ಮಹಾನ ದೇಶವಾಗಿದೆ. ಹೊಸ ಧರ್ಮಗಳು, ವರ್ಣ ಆಶ್ರಮ ಪದ್ಧತಿಗಳು, ವೃತ್ತಿಪದ್ಧತಿಯ ಪರಿಣಾಮವಾಗಿ ಜಾತಿ, ಕುಲ, ಗೋತ್ರ, ಮತ ಮತ್ತು ಪಂಥಗಳ ಬೆಳವಣಿಗೆ ಆದವು. ಅನೇಕ ಭಾಷೆ, ಅನೇಕ ಧರ್ಮ, ಅನೇಕ ಸಂಸ್ಕೃತಿಗಳು ಇಂದಿನ ನಮ್ಮ ಭವ್ಯ ಪರಂಪರೆಯಲ್ಲಿ ಕಾಣುತ್ತೇವೆ. ಋಷಿ ಮುನಿಗಳು, ಸಾಧು, ಸಂತರು, ದಾಸರು, ಶರಣರು ಮತ್ತು ಸೂಫಿಗಳು ಈ ನೆಲದಲ್ಲಿ ಅಹರ್ನಿಶಿ ಸೇವೆಗೈದಿದ್ದಾರೆ. ಮಹಾರಾಷ್ಟ್ರದಲ್ಲಿ ಅದ್ವೈತ ಮತದ ಸಿದ್ಧಿನಾಥ ಸಂಪ್ರದಾಯವನ್ನು ಒಂದು ವಿಶಿಷ್ಠ ಬಗೆಯಾಗಿ, ಬೆಳೆದದ್ದನ್ನು ಕಾಣುತ್ತೇವೆ. ಈ ಸಿದ್ದಿನಾಥ ಪರಂಪರೆಯನ್ನು ಕ್ರಮವಾಗಿ ನಿವೃತ್ತಿನಾಥ, ಸೋಪಾನದೇವ, ಜ್ಞಾನದೇವ ಮತ್ತು ಸಹೋದರಿ ಮುಕ್ತಾಬಾಯಿ, ಚಾಂಗದೇವ, ವಿಠೋಬಾ, ಕೇಚರ ಮತ್ತು ನಾಮದೇವ ಮುಂತಾದವರನ್ನು ಕಾಣುತ್ತೇವೆ. ಇವರು ವಿಷ್ಣು ದೇವನನ್ನು ಹಾಗೂ ಅವನ ಅವತಾರಗಳನ್ನು ಸಾಂಕೇತಿಕವಾಗಿ ಪೂಜಿಸುತ್ತ ಮತ್ತು ಅವನ ಪವಾಡಗಳನ್ನು ಪದಗಳ ಮೂಲಕ ಹಾಡುತ ಸಮಾಜದಲ್ಲಿ ಭಕ್ತಿ ಚಳುವಳಿಯನ್ನು ಮಾಡಿದ್ದಾರೆ. ಈ ಪರಂಪರೆಯಲ್ಲಿ ಬರುವ ಚಾಂಗದೇವನ ಪತ್ರ ಅತಿ ಮಹತ್ವದ್ದಾಗಿದೆ.
ಚಾಂಗದೇವರು ಮಹಾರಾಷ್ಟ್ರದ “ತಾಪಿ” ನದಿಯ ದಡದ ಮೇಲಿರುವ “ಸುಂದರಪುರ” ಎಂಬ ಹಳ್ಳಿಯಲ್ಲಿ, ವಿಶ್ವಕರ್ಮ ಬ್ರಾಹ್ಮಣ ಮನೆತನದ ಮಾಧವ ಪಂಡಿತರ ಮಗನಾಗಿ ಜನಿಸಿದರು. ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎಂಬಂತೆ ಬಾಲಕ ಚಾಂಗದೇವನಲ್ಲಿ ಮಹಾಮಾನವತಾವಾದಿಯ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದವು. ಮಾಧವ ಪಂಡಿತರು ಗ್ರಾಮದ ಮುಖ್ಯಸ್ಥರು, ಪೂಜಾರಿಗಳು ಜೋತಿಷಿಗಳು, ಕಲಾಕಾರರು ಮತ್ತು ವೈದ್ಯರು ಆಗಿದ್ದರು. ಚಾಂಗದೇವರಿಗೆ ಉಪನಯನ ಸಂಸ್ಕಾರವನ್ನು ಮಾಡಿಸಿದರು. ದಿನಾಲು ಧ್ಯಾನವನ್ನು ಮಾಡುವಂತೆ ಬುದ್ಧಿವಂತ ಚಾಂಗದೇವನು ವೇದಗಳನ್ನು ಉಪನಿಷತ್ತು, ಆರು ಶಾಸ್ತ್ರಗಳನ್ನು ಮತ್ತು ಪುರಾಣಗಳನ್ನು ಕಲಿತರು. ಅಷ್ಟಕ್ಕೆ ತೃಪ್ತನಾಗದ ಚಾಂಗದೇವ ತತ್ವಶಾಸ್ತ್ರ ಮತ್ತು ಯೋಗ ಶಾಸ್ತ್ರ ಕಲಿಯಲು ಕಾಶಿ ಕ್ಷೇತ್ರಕ್ಕೆ ಹೋದರು. ಅಲ್ಲಿ ತನ್ನ ಜ್ಞಾನದ ಹಸಿವನ್ನು ಹಿಂಗಿಸಿಕೊಂಡು ಮರಳಿ ಸುಂದರಪುರಕ್ಕೆ ಬಂದರು. ಪವಾಡ ಪುರುಷನಾಗಿ ಬದಲಾದ ಚಾಂಗದೇವನ ಪಾಂಡಿತ್ಯ ಮತ್ತು ಜ್ಞಾನ ಸಾಧನೆಯಿಂದಾಗಿ ಸಾಕಷ್ಟು ಜನ ಇವರ ಅನುಯಾಯಿಗಳಾಗುತ್ತಾರೆ. ಪಂಢರಪುರದಲ್ಲಿ ಜಪ ಅನುಷ್ಠಾನವನ್ನು ಕೈಕೊಂಡು ಜಾಗೃತ ಸ್ಥಳವನ್ನಾಗಿ ಪರಿವರ್ತಿಸಿದರು. ಲೋಕಸಂಚಾರವನ್ನು ಮಾಡುತ್ತ ಸಾಧನೆಗೈಯುತ್ತ ಸಾತಾರಾ ಜಿಲ್ಲೆಯ ಕೊರೆಗಾಂವ ತಾಲೂಕಿನ ಕಟಗಾಂವ ಹಳ್ಳಿಯಲ್ಲಿ ಕ್ಷೇತ್ರೋಜಿರಾವ ಬರ್ಗೆಯವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ, ತತ್ವೋಪದೇಶವನ್ನು ಮಾಡಿ ನರಸಿಂಹ ಮೂರ್ತಿಯನ್ನು ಪೂಜಿಸಲು ನೀಡಿ ಲೋಕ ಸಂಚಾರವನ್ನು ಕೈಗೊಂಡರು. ತಪ್ಪಿತಸ್ಥ ಅನುಯಾಯಿಗಳನ್ನು ಶಿಕ್ಷಿಸಿ ಸುಧಾರಿಸುವದು ಅವರ ಸಂಚಾರದಲ್ಲಿಯ ಒಂದು ನಿಯಮವಾಗಿತ್ತು.
ಸಂತ ಚಾಂಗದೇವರು ಉತ್ತರ ಭಾರತದಲ್ಲಿ ಸಂಚರಿಸುವಾಗ ಅನೇಕ ಪವಾಡಗಳನ್ನು ಮಾಡಿ ಪವಾಡ ಪುರುಷರೆಂದೆನಿಸಿಕೊಂಡರು. ಕ್ರಿ.ಶ. 1285ರಲ್ಲಿ ದೆಹಲಿಯನ್ನು ಮುಸ್ಲಿಂ ಅರಸನಾದ ‘ಬಲ್ಬನ್‌’ ಎಂಬುವನು ಆಳುತ್ತಿದ್ದನು. ರಾಜನ ಮಗನಿಗೆ ವಾಸಿಯಾಗದ ಕಾಯಿಲೆ ಅಂಟಿಕೊಂಡಿತ್ತು. ಎಷ್ಟೋ ಹಕೀಮರು ಮತ್ತು ವೈದ್ಯರು ಓಷಧಗಳನ್ನು ಕೊಟ್ಟರೂ ಕಾಯಿಲೆ ವಾಸಿಯಾಗಲಿಲ್ಲ. ಅಲ್ಲದೆ ಅವರೆಲ್ಲರೂ ಹುಲಿಯ ಹಾಲು ಕುಡಿಸಿದರೆ ಮಾತ್ರ ಕಾಯಿಲೆ ವಾಸಿಯಾಗುತ್ತದೆಂದು ತಿಳಿಸಿದರು. ಅದೇ ಸಮಯಕ್ಕೆ ಚಾಂಗದೇವರು ಅನೇಕ ಅನುಯಾಯಿಗಳನ್ನು ಕರೆದುಕೊಂಡು ಹುಲಿಯನ್ನು ಸವಾರಿಯನ್ನಾಗಿ ಮಾಡಿಕೊಂಡು ಸರ‍್ವನ್ನು ಚಾಬುಕವನ್ನಾಗಿ ಮಾಡಿಕೊಂಡು ಚೇಳುಗಳನ್ನು ಹಗ್ಗವನ್ನಾಗಿ ಮಾಡಿಕೊಂಡು ದೆಹಲಿಯ ಒಳಗೆ ಬರುತ್ತದ್ದರು. ಈ ಸುದ್ದಿಯನ್ನು ಗಮನಿಸಿದ ದೆಹಲಿಯ ರಾಜನು ತನ್ನ ಮಗನ ಕಾಯಿಲೆಗೆ ಇವನೇ ಏನಾದರೂ ಉಪಾಯ ಮಾಡಬಹುದೆಂದು ತನ್ನ ಆಸ್ಥಾನಕ್ಕೆ ಕರೆಯಿಸಿಕೊಂಡನು. ಈಗ ಚಾಂಗದೇವ ರಾಜನಾದ ಬಲ್ಬನ್‌ನನ್ನು ಅವನ ಮಗನನ್ನು ವಿಚಾರಿಸಿ ತಮ್ಮ ವರದ ಹಸ್ತವನ್ನು ರೋಗಿಯ ತಲೆಯ ಮೇಲಿಡಲು ಆರಾಮವಾಯಿತು. ಇವರ ಅದ್ಭುತ ಪವಾಡವನ್ನು ಅರಿತ ದೆಹಲಿಯ ಅರಸ ಇವರನ್ನು ‘ರಾಜಾ ಬಾಗಸವಾರ ಪೀರಾಸಾಹೇಬ’ ಎಂದು ಕರೆದು ಎಂದು ಕರೆಯಲು ಪ್ರಾರಂಭಿಸಿದರು. ಚಾಂಗದೇವರು ಲೋಕಸಂಚಾರದ ಕಾರ್ಯವನ್ನು ಮಾಡುತ್ತ ಬರುವಾಗ ಮಹಾರಾಷ್ಟ್ರದ ಮಹಾನ ಸಂತನ ಪರಿಚಯವಾಯಿತು. ಅವರೆ ಜ್ಞಾನದೇವ, ಇವನು ವೇದಾಧ್ಯಯನ ಮಾಡಿದವನು. ಜ್ಞಾನಿಧಿಯೂ, ಪವಾಡಪುರುಷನೂ, ಸಮಾಜ ಸುಧಾರಕನೂ, ಅನೇಕ ರೋಗಗಳನ್ನು ಪರಿಹರಿಸುವವನೂ ಆಗಿದ್ದನು. ಅದ್ವೈತ ಮತದ ತತ್ವವನ್ನು ಚಾಂಗದೇವನಿಗೆ ಬೋಧಿಸಿ ನಾಥ ಪರಂಪರೆಯನ್ನು ಬೆಳೆಸಿದರು. ಪಂಢರಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಕ್ರಮವಾಗಿ ನಿವೃತ್ತಿನಾಥ, ಸೋಪಾನದೇವ ಜ್ಞಾನದೇವ ಮತ್ತು ಸಹೋದರಿ ಮುಕ್ತಾಬಾಯಿ, ಚಾಂಗದೇವ, ವಿಠೋಬಾ, ಕೋಚರ ಮತ್ತು ನಾಮದೇವ ಮುಂತಾದವರು ಸಿದ್ಧನಾಥ ಪಂಥವನ್ನು ವಿಷ್ಣುವಿನ ವಿವಿಧ ಪವಾಡಗಳನ್ನು ಅವತಾರಗಳನ್ನು ತಮ್ಮ ಪದಗಳಲ್ಲಿ ಹೆಣಿದು, ಹಾಡಿ, ಕುಣಿದು ಹೊಗಳಿದ್ದಾರೆ. ಚಾಂಗದೇವನ ಪ್ರಭಾವವು ಕರ್ನಾಟಕದಲ್ಲಿ ಆಗುವುದರಿಂದ ಎಷ್ಟೋ ಜನರು ತಮ್ಮ ಮನೆದೇವರನ್ನಾಗಿ ಸ್ವೀಕರಿಸಿದ್ದಾರೆ. ಭಕ್ತಿ ಚಳುವಳಿಗಳನ್ನು ಮಾಡುವಂಥ ದಾಸರು ಹುಟ್ಟಿಕೊಂಡರು. ಪರಿಣಾಮವಾಗಿ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಅವನ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಪ್ರಸಿದ್ಧವಾದವುಗಳೆಂದರೆ ಯಮನೂರಿನ ಚಾಂಗದೇವ ದೇವಾಲಯ, ಶಿಂಧಿಕುರಬೇಟದ ಚಾಂಗದೇವ ಮಂದಿರ, ಹುಬ್ಬಳ್ಳಿ, ಬೆಳಗಾವಿ ಮುಂತಾದವುಗಳಲ್ಲಿ ಕಾಣುತ್ತೇವೆ. ಪಂಢರಪುರದ ಪಂಢರಿನಾಥನ ಭಕ್ತರು ಚಾಂಗದೇವನ ಭಕ್ತರಾಗಿದ್ದಾರೆ. ಚಾಂಗದೇವನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನಲ್ಲಿ ನೆಲೆಸಿ ಪವಾಡ ಮಾಡಿ ಲೀಲೆಯನ್ನು ಮೆರೆದಿದ್ದಾನೆ. ಹೀಗಾಗಿ ಅವನನ್ನು ಯಮನೂರ‍್ಪ ಇಲ್ಲವೇ ರಾಜಾ ಬಾಗಸವಾರ ಪೀರಸಾಹೇಬ ಎಂದು ಕರೆಯುತ್ತಾರೆ.
ಇಲ್ಲಿಯ ಪವಾಡಗಳೆಂದರೆ ನಿಜವಾದ ಅನುಯಾಯಿಗಳಿಲ್ಲದ ಕಪಟ ಭಕ್ತರನ್ನು ಕುರಿಯ ರೂಪದಲ್ಲಿ ಸಂಕೇತಿಸಿ ಅವುಗಳನ್ನು ಬಲಿಕೊಡುವುದು ಹಳ್ಳದ ನೀರಿನಿಂದ ದೀಪವನ್ನು ಉರಿಸುವುದು, ತೀರ್ಥಸೇವನೆಯಿಂದ ಚರ್ಮರೋಗ ನಿವಾರಣೆ ಮಾಡುವುದು ಇಲ್ಲಿಯ ಪ್ರಮುಖ ಪವಾಡಗಳಾಗಿವೆ. ಅದ್ವೈತ ಮತದ, ಸಿದ್ಧಿನಾಥ ಪರಂಪರೆಯ ಒಬ್ಬ ಅದ್ವಿತೀಯ ಪವಾಡ ಪುರುಷ್ ಭರತಖಂಡವನ್ನು ಸಂಚರಿಸಿ ದೀನದಲಿತರನ್ನು ಉದ್ದರಿಸಿ, ಸಮಾಜ ಸೇವೆ ಮಾಡುತ್ತ ಜನರ ಬದುಕನ್ನು ಪಾವನ ಮಾಡುತ್ತ ಸಾಗಿದರು. ಖಗೋಳಶಾಸ್ತ್ರ, ಗಣಿತ, ವೈದ್ಯಕೀಯ ಶಾಸ್ತ್ರ, ತತ್ವಶಾಸ್ತ್ರದಲ್ಲಿ ಮತ್ತು ಧಾರ್ಮಿಕ ಪವಾಡಗಳಲ್ಲಿ ಅಪಾರ ಪಾಂಡಿತ್ಯವನ್ನು ಸಾಧಿಸಿದ ಚಾಂಗದೇವ ತನ್ನ ಮೂಲ ಸ್ಥಳವಾದ ಸುಂದರ ಪುರದಲ್ಲಿ ನೆಲೆಸಿ ಅನೇಕ ಕಾಲದ ವರೆಗೆ ಜನಸೇವೆ ಸಲ್ಲಿಸಿ ಸಮಾಜೋದ್ಧಾರಗೈದಿದ್ದಾರೆ. ನಿಸರ್ಗ ಪ್ರಿಯವಾದ ಚಾಂಗದೇವರು ಮಹಾರಾಷ್ಟ್ರದ ನರ್ಮದಾ ನದಿಯ ದಡದ ಮೇಲಿರುವ ಪುನತಾಂಬೆ ಎಂಬ ಸುಕ್ಷೇತ್ರದಲ್ಲಿ ನೆಲೆಸಿ ಅನುಷ್ಠಾನವನ್ನು ಮಾಡಿ ಜನ ಕಲ್ಯಾಣ ಕಾರ್ಯವನ್ನು ಮಾಡಿದ್ದಾರೆ. ಅದ್ವೈತವನ್ನು ಜನರಿಗೆ ಬೋಧಿಸುತ್ತ ಪುನತಾಂಬೆಯಲ್ಲಿ ಕ್ರಿ.ಶ. 1338ರಲ್ಲಿ ಚಾಂಗದೇವನು ತನ್ನ ಕೊನೆಯ ಸಂದೇಶವನ್ನು ಭಕ್ತರಿಗೆ ನೀಡುತ್ತ ಕೊನೆಯುಸಿರನ್ನೆಳೆದು ಅನಂತತೆಯಲ್ಲಿ ಲೀನರಾದರು. ಅಲ್ಲಿಯೇ ಅವರ ಪವಿತ್ರ ಸಮಾಧಿಯನ್ನು ನಿರ್ಮಿಸಿ ಮಂದಿರವನ್ನು ಕಟ್ಟಿದ್ದಾರೆ. ಅನುಭವಿಕರು, ಪಂತರು ಇವರ ಒಂದು ಪಂಥಕ್ಕೆ ಸಿದ್ಧಿನಾಥ ಪಂಥವೆಂದು ಕರೆದಿದ್ದಾರೆ. ಅದ್ವೈತವನ್ನು ಜ್ಞಾನದೇವನು ಚಾಂಗದೇವನಿಗೆ ಉಪದೇಶಿಸಿ ತಮ್ಮ ಒಂದು ಪರಂಪರೆಯಲ್ಲಿ ಇವರನ್ನು ಇರಿಸಿಕೊಂಡು ಬೆಳೆಸಿದ್ದಾರೆ. ಚಾಂಗದೇವರು ಕವಿಗಳಾಗಿದ್ದರು. ಇವರು ರಚಿಸಿದ ಅನೇಕ ಪದ್ಯಗಳಲ್ಲಿ ಈಗ ಕೆಲವು ಮಾತ್ರ ಲಭ್ಯವಿದ್ದು ಹಲವಾರು ಪದ್ಯಗಳು ಕೆಳೆದು ಹೋಗಿವೆ. ಜ್ಞಾನ ದೇವನು ಚಾಂಗದೇವನಿಗಾಗಿ ಸುಮಾರು 65 ಪದ್ಯಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಜೀವನದ ಮುಕ್ತಿಯ ಸಾರ ಅಡಗಿದೆ. ಇವರ ಕಾರ್ಯ ಸಾಧನೆಯಿಂದಾಗಿ ಕರ್ನಾಟಕ ಸಂತರ ಮತ್ತು ಮಹಾರಾಷ್ಟ್ರದ ಸಂತರ ನಡುವೆ ಒಂದು ಅನ್ಯೋನ್ಯ ಸಂಬಂಧವಿದೆ ಎಂಬುವುದು ಗೊತ್ತಾಗುತ್ತದೆ. 13ನೆಯ ಶತಮಾನದಲ್ಲಿ ಬಾಳಿ ಬೆಳಗಿದ ಚಾಂಗದೇವನು ಭಾರತದ ಸನಾತನ ಪರಂಪರೆಯ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿ ಉಳಿದಿದ್ದಾರೆ. 
ವರದಿ—-
– ಪವನ ಖಟಾವಕರ, 
ಬೆಳಗಾವಿ 
– * * * –
error: Content is protected !!