ಬೆಳಗಾವಿ-:೨೨: ಬೆಳಗಾವಿ ರಂಗಸಂಪದವು ಪ್ರತಿ ವರ್ಷದಂತೆ ಇದೆ ಬುಧವಾರ ಮಾರ್ಚ ೨೭ ರಂದು ವಿಶ್ವರಂಗಭೂಮಿ ದಿನಾಚರಣೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ದಿ:೨೭-೦೩-೨೦೨೪ ರಿಂದ ದಿ:೨೯-೦೩-೨೦೨೪ರ ವರೆಗೆ ಮೂರು ದಿನಗಳ ನಾಟಕೋತ್ಸವ ಹಾಗೂ ರಂಗಸಖ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ರಂಗಸಂಪದ ಹಾಗೂ ಭಾರತೀಯ ಜೀವವಿಮಾ ನಿಗಮ ಸಹಯೋಗದಲ್ಲಿ ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ ಎಂದು ರಂಗಸಂಪದ ಅಧ್ಯಕ್ಷರಾದ ಡಾ.ಅರವಿಂದ ಕುಲಕರ್ಣಿ ತಿಳಿಸಿದರು.
ಅವರು ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ನಾಟಕೋತ್ಸವ ಮೊದಲನೆ ದಿನ ದಿ:೨೭-೦೩-೨೦೨೪ ರಂದು ಸಂಜೆ ೬-೦೦ ಗಂಟೆಗೆ ವಿಶ್ವರಂಗಭೂಮಿ ದಿನಾಚರಣೆ ಕರ‍್ಯಕ್ರಮ ಉದ್ಘಾಟನೆಯಾಗಲಿದ್ದು, ಅಂದು ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿಗಳಾದ ಶ್ರೀ.ಬಿ.ಪಿ.ರವಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ರಂಗಸಂಪದ ಪೋಷಕರು ಹಾಗೂ ಹಿರಿಯ ನ್ಯಾಯವಾದಿಗಳಾದ ಶ್ರೀ.ಎಸ್.ಎಂ.ಕುಲಕರ್ಣಿ ಇವರು ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸುವರು.
ರಂಗಸಂಪದ ಗೌರವಾಧ್ಯಕ್ಷರಾದ ಶ್ರೀ ಶ್ರೀಪತಿ ಮಂಜನಬೈಲು ಹಾಗೂ ಡಾ.ಅರವಿಂದ ಕುಲಕರ್ಣಿ ಉಪಸ್ಥಿತರಿರುವರು ಎಂದು ತಿಳಿಸಿದ ಅವರು ರಂಗಸಂಪದ ಕೊಡಮಾಡುವ ೨೦೨೪ರ ಸಾಲಿನ ರಂಗಸಖ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದ್ದು, ೨೦೨೪ರ “ರಂಗಸಖ” ಪ್ರಶಸ್ತಿಯನ್ನು, ಖ್ಯಾತ ರಂಗಕರ್ಮಿ ಶ್ರೀ ವಿನೋದ ಅಂಬೇಕರ, ಗುಳೇದಗುಡ್ಡ ಇವರಿಗೆ ಪ್ರಧಾನ ಮಾಡಲಾಗುವುದು ಎಂದು ಡಾ. ಅರವಿಂದ ಕುಲಕರ್ಣಿ ತಿಳಿಸಿರು.
ಅದರಂತೆ ರಂಗಸಂಪದ ಹಿರಿಯ ಕಲಾವಿದರಾದ ಶ್ರೀಮತಿ ನಲಿನಿ ವಿದ್ಯಾಸಾಗರ ಹಾಗೂ ಶ್ರೀ ಗುರುದತ್ತ ಪೆಡ್ನೇಕರ ಅವರಿಗೆ ಸನ್ಮಾನ ಕಾರ‍್ಯಕ್ರಮವು ಜರುಗಲಿದೆ ಎಂದ ಅವರು ನಂತರ ಗಮ್ಯ ತಂಡ, ಶ್ರೀರಂಗಪಟ್ಟಣ ಇವರಿಂದ ಹಾಸ್ಯ ನಾಟಕ “ಪರಿಣಯ ಪ್ರಸಂಗ” ಪ್ರದರ್ಶನವಾಗಲಿದೆ. ರಚನೆ/ಸಂಗೀತ ಶ್ರೀ ಮುರಳಿ ಶೃಂಗೇರಿ, ವಿನ್ಯಾಸ/ನಿರ್ದೇಶನ ಶ್ರೀ ರಮೇಶ ಬೆಣಚಲ್ ಅವರದ್ದಾಗಿದೆ.
ನಾಟಕೋತ್ಸವ ಎರಡನೆ ದಿನ ದಿನಾಂಕ:೨೮-೦೩-೨೦೨೪ ರಂದು “ಪರಿಮಳದವರು” ನಾಟಕಕ್ಕೆ ಕಾಣಿಕೆ ನೀಡಿದ ಮಹಾನುಭಾವರನ್ನು ಸನ್ಮಾನಿಸಲಾಗುವುದು. ನಂತರ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ, ಸವದತ್ತಿ ಇವರಿಂದ “ಬಾಸಿಂಗ ಬಲ” ನಾಟಕ ಪ್ರದರ್ಶನವಾಗಲಿದೆ. ರಚನೆ: ಶ್ರೀ ಶ್ರೀನಿವಾಸ ವೈಧ್ಯ, ರಂಗರೂಪ/ನಿರ್ದೇಶನ ಶ್ರೀ.ಝಕೀರ ನದಾಫ್ ಅವರದ್ದಾಗಿದೆ.
ನಾಟಕೋತ್ಸವ ಕೊನೆಯ ದಿನ ದಿನಾಂಕ:೨೯-೦೩-೨೦೨೪ ರಂದು ರಂಗಸಂಪದ ಬೆಳಗಾವಿ ತಂಡದಿಂದ ಶ್ರೀ.ರಾಘವೇಂದ್ರ ಸ್ವಾಮಿ ಜೀವನಾಧಾರಿತ ನಾಟಕ “ಪರಿಮಳದವರು” ಪ್ರದರ್ಶನಗೊಳ್ಳಲಿದೆ. ರಚನೆ ಶ್ರೀ ಜಿ.ಬಿ.ಜೋಷಿ (ಜಡಭರತ), ನಿರ್ದೇಶನ ಶ್ರೀ ಶ್ರೀಪತಿ ಮಂಜನಬೈಲು ಅವರದಾಗಿದೆ ಅದರಂತೆ ಈ ನಾಟಕೋತ್ಸವಕ್ಕೆ ಎಲ್ಲ ರಂಗ ಪ್ರೀಯರು ಆಗಮಿಸಿ ನಾಟಕಗಳನ್ನು ವೀಕ್ಷಿಸಲು ರಂಗಸಂಪದ ಅಧ್ಯಕ್ಷರಾದ ಡಾ.ಅರವಿಂದ ಕುಲಕರ್ಣಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಂಗಸಂಪದ ಕಾರ್ಯದರ್ಶಿಗಳಾದ ಪ್ರಸಾದ ಕಾರಜೋಳ,ಗುರುನಾಥ ಕುಲಕರ್ಣಿ,ರಾಮಚಂದ್ರ ಕಟ್ಟಿ, ಅನಂತ ಪಪ್ಪು,ಹಾಜರಿದ್ದರು.