ಬೆಳಗಾವಿ-೨೨: ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇವಿಎಂ ಮತಯಂತ್ರಗಳ ಮೊದಲ ಹಂತದ ಯಾದೃಚ್ಛೀಕರಣ (ರ್ಯಾಂಡಮೈಜೇಷನ್) ಪ್ರಕ್ರಿಯೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಜೊತೆಗೆ ರ್ಯಾಂಡಮೈಜೇಷನ್ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ರ್ಯಾಂಡಮೈಜೇಷನ್ ಪ್ರಕ್ರಿಯೆ ಮೂಲಕ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಿಧಾನಸಭಾ ಮತಕ್ಷೇತ್ರವಾರು ಹಂಚಿಕೆ ಮಾಡಲಾಗುವುದು. ಹೀಗೆ ಅಂತಿಮಗೊಳಿಸಲಾದ ಮತಯಂತ್ರಗಳ( ಇವಿಎಂ) ಪಟ್ಟಿಯನ್ನು ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರುಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ, ವಿವಿಧ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರು ಹಾಜರಿದ್ದರು.
5874 ಬಿಯು, ಕಂಟ್ರೊಲ್ ಯುನಿಟ್ ಹಂಚಿಕೆ:
ಇವಿಎಂ ಮತಯಂತ್ರಗಳ ಮೊದಲ ಹಂತದ ರ್ಯಾಂಡಮೈಜೇಷನ್ ಪ್ರಕ್ರಿಯೆ ಮೂಲಕ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಲಭ್ಯವಿರುವ ಮತಯಂತ್ರಗಳನ್ನು ಶೇ.130ರ ಪ್ರಮಾಣದಲ್ಲಿ 5874 ಬ್ಯಾಲೆಟ್ ಯುನಿಟ್; 5874 ಕಂಟ್ರೋಲ್ ಯುನಿಟ್‌ಮತ್ತು 5874 ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಯಿತು.
ವಿಧಾನಸಭಾ ಕ್ಷೇತ್ರವಾರು ಹಂಚಿಕೆಯಾಗಿರುವ ಮತಯಂತ್ರಗಳನ್ನು ಮುಂದಿನ ಹಂತದ ರ್ಯಾಂಡಮೈಜೇಷನ್ ಸಂದರ್ಭದಲ್ಲಿ ಮತಗಟ್ಟೆವಾರು ಹಂಚಿಕೆ ಮಾಡಲಾಗುತ್ತದೆ.