ಬೆಳಗಾವಿ-೨೨: ಕುರುಬ ಸಮಾಜಕ್ಕೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಹೇಳಿ ಇಲ್ಲಿನ ಆಕಾಂಕ್ಷಿಯಾಗಿದ್ದ ಲಕ್ಷ್ಮಣರಾವ್ ಚಿಂಗಳೆ ಅವರಿಗೆ ಬುಡಾ ಅಧ್ಯಕ್ಷರನ್ನಾಗಿ ಮಾಡಿ ಕಾಂಗ್ರೆಸ್ ಮುಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಮಾಜಿ ಶಾಸಕ ರಮೇಶ ಕುಡಚಿ ಅಸಮಾಧಾನ ವ್ಯಕ್ತಪಡಿಸಿದರು.
ಕುರುಬ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆಯೇ ಚಿಕ್ಕೋಡಿಗೆ ಕುರುಬ ಸಮಾಜಕ್ಕೆ ಹಾಗೂ ಬೆಳಗಾವಿಗೆ ಲಿಂಗಾಯತ ಸಮಾಜಕ್ಕೆ ಟಿಕೆಟ್ ನೀಡುವುದಾಗಿ ಹೇಳಿ ಲಕ್ಷ್ಮಣರಾವ್ ಚಿಂಗಳೆಗೆ ಬುಡಾ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ ನಾವಲಗಟ್ಟಿ ಗೆ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿ ಮುಗಿಗೆ ತುಪ್ಪ ಸವರಿದ್ದಾರೆ. ಒಬ್ಬರಿಗೆ ಚಾಕೊಲೇಟ್ ಕೊಟ್ಟು ಇನ್ನೊಬ್ಬರಿಗೆ ಬಿರಿಯಾನಿ ತಿನ್ನುವುದು ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಕಾಂಗ್ರೆಸ್ ಸಲುವಾಗಿ ದುಡಿದ ಕಾರ್ಯಕರ್ತರು ಸಾಕಷ್ಟು ಜನ ಇದ್ದಾರೆ. ಎಲ್ಲ ಸಮುದಾಯದವರನ್ನು ತೆಗೆದುಕೊಂಡ ಬಲಿಷ್ಠ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೃಹತ್ ಕಾಂಗ್ರೆಸ್ ಭವನ ನಿರ್ಮಾಣ ಮಾಡಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡಲು ಅವಕಾಶ ಇದೆ.