ನೇಸರಗಿ-06: (ವರದಿ ಗಂಗಪ್ಪ ಗುಜನಟ್ಟಿ)
ಬೈಹೊಂಗಲ ತಾಲ್ಲೂಕಿನ ಲನೇಸರಗಿ ಈಗಿನ ಹೋಬಳಿ.ಇದೇ ನೇಸರಗಿ 9ನೇl ಶತಮಾನದ ಸೌದತ್ತಿಯ ರಟ್ಟರ ಕಾಲದ ಚಿಕ್ಕ ಆಡಳಿತ ಘಟಕವಾಗಿತ್ತೆನ್ನುವುದು ಐತಿಹಾಸಿಕ ಸತ್ಯ.ರಾಷ್ಟ್ರಕೂಟರ ಮಾಂಡಲೀಕರಾದ ಸೌದತ್ತಿಯ ರಟ್ಟರು ಆನಂತರ ಸೇವೂಣರ ಕಾಲದಲ್ಲಿ ಸ್ವತಂತ್ರರಾಗಿ ಆಡಳಿತ ನಡೆಸಿದರು. ಮೊದಲು ಸೌದತ್ತಿ ಇವರ ರಾಜಧಾನಿಯಾಗಿತ್ತು. ನಂತರ ಕ್ರಿಸ್ತ ಶಕ 1210 ರಲ್ಲಿ ವೇಣುಗ್ರಾಮ (ಈಗಿನ ಬೆಳಗಾವಿ)ನಂತರ ಅವರ ರಾಜಧಾನೀಯಾಯ್ತು.ಈ ನೇಸರಗಿಯ ಐತಿಹಾಸಿಕ ಜೋಡುಗುಡಿಯಲ್ಲಿ ಶಿಲಾಶಾಸನಗಳ ಸಾಕ್ಷಿಯಾಗಿದೆ.ಈ ಶಾಸನದ ಆಧಾರದಲ್ಲಿ ಅದು ರಟ್ಟರ ಕಾರ್ತ್ಯವೀರ(4)ನ ವರೆಗಿನ ವಂಶಾವಳಿಯನ್ನೂ, ನೇಸರಗಿಯು 6ಹಳ್ಳಿಗಳನ್ನೊಳಗೊಂಡ ಆಡಳಿತ ಘಟಕವಾಗಿತ್ತೆನ್ನುವುದು ತಿಳಿದುಬರುತ್ತದೆ.
ಈ ಶಾಸನದ ಪ್ರಕಾರ ರಾಜಾ ಕಾರ್ತಿವೀರ್ಯನು ಹೆಬ್ಬಯನಾಯಕನೆಂಬುವವನಿಗೆ ನಾಯಕ ಪಟ್ಟ ನೀಡಿದನೆಂಬುದು ತಿಳಿದು ಬರುತ್ತದೆ.ಇವನ ಮಗ ಚಾಚಯ ನಾಯಕ ಮತ್ತವನ ಪತ್ನಿ ಮಾಯಾದೇವಿಯರು ಹಲ್ಲೇಶ್ವರ (ಹೆಬ್ಬೇಶ್ವರ),ಮಾಣಿಕೇಶ್ವರ, ಸಿದ್ಧೇಶ್ವರ ಎಂಬ ಶೈವ ಜೋಡಿ ಗುಡಿಗಳನ್ನು ನೇಸರಗಿಯಲ್ಲಿ ಕಟ್ಟಿಸಿದರು. ಕಾಲಾಮುಖಿ ಪಂಥಕ್ಕೆ ಸೇರಿದ “ಹೊನ್ನಯ್ಯ”ನೆಂಬುವನು ಇದರ ಅರ್ಚಕನಾಗಿದ್ದನು. ಇವೇ ಮೂರು ಗುಡಿಗಳು ಈಗ ಜೋಡುಗುಡಿಗಳೆಂದು ಪ್ರಖ್ಯಾತವಾಗಿವೆ.
ಕಿತ್ತೂರು ಸಂಸ್ಥಾನದ ಕಾಲದಲ್ಲೂ ಈ ಜೋಡುಗುಡಿಗಳಿಗೆ ವಿಶೇಷವಾದ ಸ್ಥಾನವಿತ್ತೆಂಬ ಪ್ರತೀತಿ ಇದೆ.ಬೇಲೂರು ಹಳೇಬೀಡುಗಳ ಸಾಲಿನಲ್ಲಿರಬೇಕಾದ ಈ ಪ್ರಖ್ಯಾತ ಜೋಡುಗುಡಿ ವಾರಸುದಾರರಿಲ್ಲದೇ ಜೂಜುಕೋರರ ತಾಣವಾಗಿದೆ.2012 ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ವೇಳೆಯಲ್ಲಿ ನೇಸರಗಿ ಗ್ರಾಮಸ್ಥರ ವಿರೋಧದ ನಡುವೆಯೂ ಜಿಲ್ಲಾಡಳಿತವು ಇಲ್ಲಿಯ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಜೋಡುಗುಡಿಯಲ್ಲಿರುವ ಶಿಲಾಶಾಸನವನ್ನು ಟ್ರ್ಯಾಕ್ಟರಿನಿಂದ ಎಳೆದುಕೊಂಡು ಹೋಗಿ ಬೆಳಗಾವಿಗೆ ಸ್ಥಳಾಂತರಿಸಿದರು.ಆ ಘಟನೆಯಲ್ಲಿ ಐತಿಹಾಸಿಕ ಜೋಡುಗುಡಿಗೆ ಧಕ್ಕೆಯಾಗಿ ಶಿಥಿಲಗೊಂಡು ಬಿದ್ದು ಹೋಗಿದೆ.ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ.ಜೀರ್ಣೋದ್ಧಾರ ದ ಬಗ್ಗೆ ಸಾಕಷ್ಟು ಭಾರಿ ಮಾಧ್ಯಮಗಳ ಮೂಲಕ, ನೇರವಾಗಿ ಮನವಿ ಮಾಡಿದರೂ ಏನೂ ಪ್ರಯೋಜನ ಆಗಿಲ್ಲ.
ಐತಿಹಾಸಿಕ ದೇಗುಲ,ಸ್ಮಾರಕ ಹಾಗೂ ಶಿಲಾಶಾಸನಗಳನ್ನು ಸಂರಕ್ಷಿಸಬೇಕಾದ ಪ್ರಾಚ್ಯವಸ್ತು ಇಲಾಖೆಯೇ ಮೌನವಾಗಿರುದನ್ನು ಗಮನಿಸಿದರೆ ಇಲಾಖೆಯ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ.
ಈ ಬಗ್ಗೆ ಮಾಧ್ಯಮದ ವರದಿ ಕಂಡು ಈಗ ಏಳೆಂಟು ತಿಂಗಳುಗಳ ಹಿಂದೆ ಇಲ್ಲಿನ ಗ್ರಾಮಸ್ಥರ ಗಮನಕ್ಕೂ ತರದೇ 12ವರ್ಷಗಳ ಹಿಂದೆ ತೆಗೆದುಕೊಂಡು ಹೋದ ಶಿಲಾಶಾಸನವನ್ನು ಅನಾಥವಾಗಿ ಎಸೆದು ಹೋಗಿದ್ದು,ಅದರ ಮೇಲಿನ ಶಿಲಾ ಲೇಖನ ಅಳಿಸಿ ಹೋಗುವುದರಲ್ಲಿ ಸಂಶಯವಿಲ್ಲ.ಆದ್ದರಿಂದ ಸಮಾಧಾನದ ವಿಷಯವೆಂದರೆ ಇದು ಪ್ರಾಚ್ಯ ವಸ್ತು ಇಲಾಖೆಗೆ ಸಂಬಂಧಪಟ್ಟಿದೆಯೆಂದು ಸೂಚನಾ ಪಲಕ ಅಳವಡಿಸಿದ್ದಾರೆ. ಆದರೆ ಇಷ್ಟಕ್ಕೆ ಸಾಲದು,ಅದರ ಜೀರ್ಣೋದ್ಧಾರದ ಕನಸಿನಲ್ಲಿ ಇಲ್ಲಿನ ಶಿವರಾತ್ರಿ ಉತ್ಸವ ಸಮಿತಿ ಹಾಗೂ ಗ್ರಾಮಸ್ಥರ ಪರವಾಗಿ ಸುರೇಶ ನಾವಲಗಟ್ಟಿ,ಶ್ರೀಕಾಂತ ಅಥಣಿಮಠ, ಗಂಗಾಧರ ಗುಜನಟ್ಟಿ,ಸುರೇಶ ಅಗಸಿಮನಿ ಮುಂತಾದವರು ಮಾಧ್ಯಮದ ಮೂಲಕ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸ್ಥಳೀಯ ಶಾಸಕರು,ಸಂಸದರು ಜೋಡುಗುಡಿಯ ಸಮಗ್ರ ಜೀರ್ಣೋದ್ಧಾರಕ್ಕಾಗಿ ಸಂಬಂಭಪಟ್ಟ ಪ್ರಾಚ್ಯ ವಸ್ತು ಇಲಾಖೆಯ ಬೆಳಗಾವಿ ಹಾಗೂ ಧಾರವಾಡದ ನಿರ್ದೇಶಕರಿಗೆ ಒತ್ತಡ ಹೇರಬೇಕೆಂದು ಕೂಡ ಮನವಿ ಮಾಡಿದ್ದಾರೆ.ಜೊತೆಗೆ ಇಲ್ಲಿರುವ ಶಿಲಾಶಾಸನದ ಕನ್ನಡ ಅನುವಾದ ಪ್ರತಿಯ ಫೋಟೋವನ್ನು ಕೂಡ ಇಲ್ಲಿನ ಜೋಡುಗುಡಿಯಲ್ಲಿ ಅಳವಡಿಸಲು ಸಲಹೆ ನೀಡಬೇಕು.
ಇಲ್ಲಿನ ಶಿವರಾತ್ರಿ ಉತ್ಸವ ಸಮಿತಿಯು ಸುಮಾರು ಮೂರು ದಶಕಗಳಿಂದ ಇಲ್ಲಿ ಸಾಧ್ಯವಾದಷ್ಟು ಸುಧಾರಣಾ ಕಾರ್ಯಗಳನ್ನು ಕೈಗೊಳ್ಳುತ್ತಾ, ಪ್ರತಿವರ್ಷ ಶಿವರಾತ್ರಿಯ ದಿನ ವಿಶೇಷ ಉತ್ಸವ ಆಚರಿಸುತ್ತಾ ಈ ಐತಿಹಾಸಿಕ ಜೋಡುಗುಡಿಯ ಇತಿಹಾಸವನ್ನು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಾ ಬಂದಿದೆ.ಇನ್ನು ಮುಂದೆ ಇಲ್ಲಿ ಯಾವುದೇ ಜೀರ್ಣೋದ್ಧಾರ ಪ್ರಾರಂಭವಾದರೂ ಸಹಾಯ,ಸಹಕಾರ ನೀಡಲು ಸದಾ ಸಿದ್ಧರೆಂದು ತಿಳಿಸಿದೆ.ಕಾರಣ ಮುಂದಿನ ದಿನಗಳಲ್ಲಿ ಪ್ರಾಚ್ಯ ವಸ್ತು ಇಲಾಖೆ ಶಿವರಾತ್ರಿ ಉತ್ಸವ ಸಮಿತಿಯ ಸಂಪರ್ಕಿಸುವುದು ಸೂಕ್ತ. ಸದ್ಯದಲ್ಲಿಯೇ ಮತ್ತೊಂದು ಶಿವರಾತ್ರಿ ಬರುತ್ತಿದ್ದು ಆ ದಿನವೇ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಸಿಹಿ ಸುದ್ಧಿ ನೀಡಿಯಾರೆಂಬ ನೀರೀಕ್ಷೆ ನಮ್ಮೆಲ್ಲರದು.ಶುಭಷ್ಯ ಶೀಘ್ರಂ