ಕನಕಗಿರಿ-02: ಶ್ರೇಷ್ಠತೆಯ ವ್ಯಸನದಿಂದ 58 ಲಕ್ಷ ಯಹೂದಿಗಳನ್ನು ಹತ್ಯೆ ಮಾಡಿದ ಹಿಟ್ಲರ್ ಕೊನೆಗೆ ಒಬ್ಬ ಹೇಡಿಯಂತೆ ಗುಂಡು ಹಾರಿಸಿಕೊಂಡು ಸತ್ತ. ಇಂಥಾ ಪರಿಸ್ಥಿತಿ ನಮ್ಮ ದೇಶದಲ್ಲಿ ಬರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕನಕಗಿರಿ ಉತ್ಸವವನ್ನು ಭವ್ಯವಾದ “ರಾಜಾ ಉಡಚಪ್ಪ ನಾಯಕ” ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ಶ್ರೇಷ್ಠರು, ಕನಿಷ್ಠರು ಇಲ್ಲವೇ ಇಲ್ಲ. ತಮ್ಮನ್ನು ತಾವು ಶ್ರೇಷ್ಠರು ಎನ್ನುವವರು, ಮತ್ತೊಬ್ಬರನ್ನು ಕನಿಷ್ಠರು ಎನ್ನುವವರು ಮನುಷ್ಯರೇ ಅಲ್ಲ. ಈ ರೀತಿಯ ಶ್ರೇಷ್ಠತೆಯ ವ್ಯಸನವನ್ನು ಹೋಗಲಾಡಿಸಲು ಬಸವಣ್ಣ, ಅಂಬೇಡ್ಕರ್ ಹೋರಾಟ ಮಾಡಿದರು ಎಂದು ವಿವರಿಸಿದರು.
ಸಮಾಜದಲ್ಲಿ ಅಸಮಾನತೆ ಇದೆ. ಇದನ್ನು ಹೋಗಲಾಡಿಸಲು ಏನಾದ್ರೂ ಪ್ರಯತ್ನ ಮಾಡಿದ್ವಾ ಎನ್ನುವ ಕುರಿತು ಪ್ರತಿಯೊಬ್ಬರೂ ತಮ್ಮನ್ನು ಪ್ರಶ್ನಿಸಿಕೊಳ್ಳಬೇಕು ಎಂದರು.
ಚತುವರ್ಣವ್ಯವಸ್ಥೆ ರೂಪಿಸಿ ಒಬ್ಬರನ್ನು ಶ್ರೇಷ್ಠರು ಉಳಿದವರನ್ನು ಕನಿಷ್ಠರು ಎನ್ನುವ ವ್ಯವಸ್ಥೆ ರೂಪಿಸಿದರು. ಇದನ್ನೇ ಹಿಟ್ಲರ್ ಮತ್ತು ಮುಸಲೋನಿ ಜರ್ಮನಿಯಲ್ಲಿ ಮಾಡಿದ್ದು. ಕೊನೆಗೆ ಅವರಿಗೆ ಯಾವ ಗತಿ ಆಯ್ತು ಎಂದು ಇಡಿ ಮನುಕುಲ ನೋಡಿದೆ ಎಂದರು.
ನಾವು ಅಂಬೇಡ್ಕರ್, ಬುದ್ದ, ಬಸವ, ಕುವೆಂಪು ಮುಂತಾದವರ ವಿಚಾರಗಳನ್ನು ಹೆಚ್ಚೆಚ್ಚು ಪಾಲಿಸುತ್ತಾ ತಾರತಮ್ಯದ ಸಮಾಜವನ್ನು ಹೋಗಲಾಡಿಸಬೇಕು. ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು, ಶೂದ್ರರಿಗೆ ಶಿಕ್ಷಣ ಸಿಕ್ಕಿದ್ದು ಇವರೆಲ್ಲಾ ಮಹನೀಯರ ಹೋರಾಟದಿಂದ.
ಈ ಚರಿತ್ರೆಯನ್ನು ನೆನಪಿಸುವುದಕ್ಕೇ ನಾವು ವಿಶ್ವ ವಿದ್ಯಾಲಯಕ್ಕೆ ಅಕ್ಕಮಹದೇವಿ ಹೆಸರು ಇಟ್ಟೆ. ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ ಎನ್ನುತ್ತಾ ಸಮಾನತೆಯ ಹಾದಿಯಲ್ಲಿ ಸರ್ಕಾರ ಜಾರಿಗೆ ತಂದ ಹಲವು ಭಾಗ್ಯಗಳನ್ನು ವಿವರಿಸಿದರು.
ನಾವು ಯಾವತ್ತೂ ಸೀತಾರಾಮನ ಸಂಸ್ಕೃತಿಯವರು. ಸೀತೆ, ಲಕ್ಷ್ಮಣನನ್ನು ಬಿಟ್ಟು ರಾಮ ಯಾವತ್ತೂ ಒಂಟಿ ಅಲ್ಲ. ರಾಮನನ್ನು ಒಂಟಿ ಮಾಡುವುದಲ್ಲ. ಸಕುಂಟುಂಬ ಸಮೇತನಾದ ಸೀತಾರಾಮ ನಮ್ಮವ ಎಂದರು.
*ಮುಂದಿನ ವರ್ಷ ಕನಕಗಿರಿ ಅಭಿವೃದ್ಧಿ ಪ್ರಾಧಿಕಾರ ರಚನೆ: ಸಿ.ಎಂ.ಮಹತ್ವದ ಘೋಷಣೆ*
ಮುಂದಿನ ವರ್ಷ ಕನಕಗಿರಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದು ಸಿ.ಎಂ. ಇದೇ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡಿದರು.
ಕನಕಗಿರಿ ಉತ್ಸವವನ್ನು ನಿರಂತರವಾಗಿ ನಡೆಸಲು, ಕನಕಗಿರಿಯ ಸರ್ವತೋಮುಖ ಅಭಿವೃದ್ಧಿಗೆ ನಾನು ಮತ್ತು ನಮ್ಮ ಸರ್ಕಾರ ಸದಾ ಬದ್ದವಾಗಿದೆ.
ಸರ್ವೋದಯ, ಸರ್ವದರ್ಮ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಈ ದಿಕ್ಕಿನಲ್ಲೇ ನಮ್ಮ ಸರ್ಕಾರ ಮುನ್ನಡೆಯಲಿದೆ.
ಕೊಪ್ಪಳ ನನ್ನದೇ ಕ್ಷೇತ್ರ. ಈ ಜಿಲ್ಲೆಯ ಜನರ ಪ್ರೀತಿಗೆ ನಾನು ಸದಾ ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ಶ್ರೀ ವೇದಮೂರ್ತಿ ಭುವನೇಶ್ವರಯ್ಯ ತಾತನವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರೂ, ಕೊಪ್ಪಳ ಜಿಲ್ಲಾ ಸಚಿವರಾದ ಶಿವರಾಜ್ ತಂಗಡಗಿ ಸಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ರಾಯರೆಡ್ಡಿ, ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಜನಾರ್ಧನರೆಡ್ಡಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ ಸೇರಿ ಹಲವು ಪ್ರಮುಖರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.