ಬೆಳಗಾವಿ-01: : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಮತ್ತು ಉಚಗಾಂವ್ ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸುವ ಕನಸು ಹೊಂದಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದ ಶ್ರೀ ಬ್ರಹ್ಮಲಿಂಗ ಯುವಕ ಮಂಡಳದ ಆಶ್ರಯದಲ್ಲಿ ನಡೆದ ಎತ್ತಿನ ಚಕ್ಕಡಿ ಓಡಿಸುವ ಸ್ಪರ್ಧೆಯಲ್ಲಿ (ಬೈಲಗಾಡಿ ಶರ್ಯತ್) ಭಾಗವಹಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಶಿಕ್ಷಣ ಸೌಲಭ್ಯ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಮುಂದಿನ 5 ವರ್ಷಗಳ ಕಾಲ ಶೈಕ್ಷಣಿಕ ಕ್ರಾಂತಿ ಮಾಡುತ್ತೇನೆ. ಬೆಳಗುಂದಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರೈತ ಭವನ ನಿರ್ಮಾಣ ಮಾಡಲಾಗುವುದು. ಬ್ರಹ್ಮಲಿಂಗ ದೇವಸ್ಥಾನಕ್ಕೆ 25 ಲಕ್ಷ ರೂ.ಗಳನ್ನು ಒದಗಿಸಲಾಗುವುದು ಎಂದು ಹೆಬ್ಬಾಳಕರ್ ತಿಳಿಸಿದರು.
ಗ್ರಾಮೀಣ ಕ್ಷೇತ್ರದ ಜನರ ಆಶಿರ್ವಾದದಿಂದ ನಾನು ಮಂತ್ರಿಯಾಗಿದ್ದೇನೆ. ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ. ಪಂಚ ಗ್ಯಾರಂಟಿ ಮೂಲಕ ಪ್ರತಿ ಕುಟುಂಬಕ್ಕೆ ನೆರವು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹ ನಿಮ್ಮ ಆಶಿರ್ವಾದ ಇರಲಿ ಎಂದು ಅವರು ವಿನಂತಿಸಿದರು.
ಈ ಸಮಯದಲ್ಲಿ ಯುವರಾಜ ಕದಂ, ರಘುನಾಥ್ ಖಂಡೇಕರ್, ಶಿವಾಜಿ ಬೋಕಡೆ, ಶಿವಾಜಿ ಬೆಟಗೇರಿಕರ್, ಸೋಮನ್ನ ಗಾವುಡಾ, ರೆಹಮಾನ್ ತಹಶಿಲ್ದಾರ, ಪ್ರಹ್ಲಾದ ಚಿರಮುರ್ಕರ್, ರವಿ ನಾಯಕ್, ಯಲ್ಲಪ್ಪ ಬೆಳಗಾಂವ್ಕರ್, ಅಶೋಕ ಗಾವುಡಾ, ರಂಜನಾ ಗಾವುಡಾ, ಬಾಳು ದೇಸೂರಕರ್, ಉಮೇಶ ಪಾಟೀಲ, ವನಿತಾ ಪಾಟೀಲ, ನಿಂಗೂಲಿ ಚವ್ಹಾನ್, ಶಿವಾಜಿ ಪಾಟೀಲ, ಸವಿತಾ ತಳವಾರ, ಗುರುನಾಥ ಪಾಟೀಲ, ಸುಖದೇವಿ ಕಾಂಬಳೆ, ಮಹಾದೇವ್ ಪಾಟೀಲ, ಮನೋಹರ್ ಬೆಳಗಾಂವ್ಕರ್ ಸಹ ಉಪಸ್ಥಿತಿರಿದ್ದರು.