23/12/2024
IMG-20240301-WA0018

IMG 20240221 WA0004 3 -

ಬೆಳಗಾವಿ-_01:ತ್ರೈಮಾಸಿಕ‌ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಕೊರತೆಯಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ 2023-24 ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಒಮ್ಮೆಲೆ ವಿತರಿಸಲು ಕ್ರಮ ಕೈಗೊಳ್ಳುವುದು ಸೂಕ್ತ. ಆದ್ದರಿಂದ ಬೆಳಗಾವಿ ಸೇರಿದಂತೆ ಪ್ರತಿವರ್ಷ ಕನಿಷ್ಠ ಎರಡು ಜಿಲ್ಲೆಗಳ ವಿಕಲಚೇತನರಿಗೆ ಆದ್ಯತೆ ಮೇರೆಗೆ ಒಂದೆರಡು ವರ್ಷಗಳಲ್ಲಿ ವಾಹನ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಮಂಜೂರಾಗಿರುವ ಪಾಲಿಹೌಸ್ ಗಳನ್ನೇ ಹೊಸದಾಗಿ ಮಂಜೂರಾದ ಫಲಾನುಭವಿಗಳಿಗೆ ಅಕ್ರಮವಾಗಿ ಹಸ್ತಾಂತರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ತಾಯಿಮಕ್ಕಳ ಆಸ್ಪತ್ರೆ ಕಾರ್ಯಾರಂಭಿಸಲು ಸೂಚನೆ:

ಈಗಾಗಲೇ ಕಟ್ಟಡ ಪೂರ್ಣಗೊಂಡಿರುವ ತಾಯಿಮಕ್ಕಳ ಆಸ್ಪತ್ರೆಗಳು ಐದಾರು ವರ್ಷವಾದರೂ ಕಾರ್ಯಾರಂಭಿಸದಿರುವುದಿಲ್ಲ. ಮುಂದಿನ ಕೆಡಿಪಿ ಸಭೆಗಿಂತ ಮುಂಚೆ ಇಂತಹ ಆಸ್ಪತ್ರೆಗಳು ಕಾರ್ಯಾರಂಭಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

ಪ್ರತಿವರ್ಷ ಕನಿಷ್ಠ ಎರಡು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು. ಹೀಗೆ ಮಾಡಿದಲ್ಲಿ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಎಲ್ಲೆಡೆ ಸ್ವಂತ ಅಂಗನವಾಡಿ ಕಟ್ಟಡಗಳನ್ನು ಹೊಂದಿದಂತಾಗುತ್ತದೆ ಎಂದು ಹೇಳಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಸ್ವಂತ ಟ್ಯಾಂಕರ್ ಖರೀದಿಸುವಂತೆ ಈಗಾಗಲೇ ಸೂಚನೆ ನೀಡಲಾಗಿತ್ತು. ಇದುವರೆಗೆ 280 ಗ್ರಾಮ ಪಂಚಾಯಿತಿಗಳಲ್ಲಿ ಸ್ವಂತ ಟ್ಯಾಂಕರ್ ಖರೀದಿಸಲಾಗಿದ್ದು, ಉಳಿದ ಪಂಚಾಯಿತಿಗಳಲ್ಲಿ ಆದಷ್ಟು ಬೇಗನೇ ಟ್ಯಾಂಕರ್ ಖರೀದಿಸಬೇಕು ಎಂದು ಸಚುವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ವಂತ ಟ್ಯಾಂಕರ್ ಹೊಂದಿದ್ದರೆ ಬೇಸಿಗೆಯಲ್ಲಿ ತುರ್ತಾಗಿ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೊಸ ಕೊಳವೆಬಾವಿಗಿಂತ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಸಬಹುದು ಎಂದು ಹೇಳಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ವಸತಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ವಸತಿ ಯೋಜನೆಗಳಿಗೆ ಸಲ್ಲಿಸುವ ಎಲ್ಲರಿಗೂ ಸೌಲಭ್ಯ ಕಲ್ಪಿಸಬೇಕು ಎಂದು ಸಚಿವರು ತಿಳಿಸಿದರು.

ವಸತಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಶಾಸಕ ರಾಜು ಸೇಠ್‌ ಹಾಗೂ ಮಹಾಂತೇಶ ಕೌಜಲಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಮಕ್ತಾಯಗೊಂಡಿರುವುದರಿಂದ ಆಕ್ಷೇಪಣೆ ಪರಿಶೀಲಿಸಿ ಕೂಡಲೇ ನೇಮಕಾತಿ ಆದೇಶ ಹೊರಡಿಸಬೇಕು ಎಂದು ತಿಳಿಸಿದರು.

ಕ್ರೀಡಾಶಾಲೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ:

ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವುದರಿಂದ ಚಿಕ್ಕೋಡಿ, ಗೋಕಾಕ ಮತ್ತಿತರ ಕಡೆಗಳಲ್ಲಿಯೂ ಕ್ರೀಡಾಶಾಲೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ಸಮತಟ್ಟು ಮಾಡಲು ಟೆಂಡರ್ ಕರೆಯಲಾಗಿದೆ.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಇರುವುದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು ಎಂದರು.
ಬೆಳಗಾವಿ ವಿಭಾಗಕ್ಕೆ 32 ಹೊಸ ಬಸ್ ಗಳನ್ನು ಈಗಾಗಲೇ ಒದಗಿಸಲಾಗಿದೆ. ಇನ್ನಷ್ಟು ಹೆಚ್ಚುವರಿ ಬಸ್ ಗಳನ್ನು ಪಡೆದುಕೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಿ:

ಸರಕಾರದ ನಿರ್ದೇಶನದಂತೆ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ನಡೆಸಬೇಕು. ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 1177 ಲಕ್ಷ ರೂಪಾಯಿ ಜಮೆಯಾಗಿರುತ್ತದೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.
ಗೃಹಲಕ್ಷ್ಮೀ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ನೋಂದಾಯಿತ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಸಚಿವರು ತಿಳಿಸಿದರು.

ಮಳೆಗಾಲ ಆರಂಭಗೊಳ್ಳುವುದಕ್ಕಿಂತ ಮುಂಚೆಯೇ ಕೆನಾಲ್ ಗಳ ಹೂಳೆತ್ತುವ ಮೂಲಕ ಸ್ವಚ್ಛಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಹೇಳಿದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲೆಯ ಕೆಲವೆಡೆ ಹೊರ ರಾಜ್ಯದವರು ಮೇವು ಖರೀದಿಸುತ್ತಿರುವುದು ಕಂಡುಬಂದಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಕೊರತೆ ಉ‌ಂಟಾಗದಂತೆ ಮುಂಚಿತವಾಗಿಯೇ ಮೇವು ಖರೀದಿಸಿ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ತಾಯಿಮಕ್ಕಳ ಆಸ್ಪತ್ರೆಗಳನ್ನು ಸಣ್ಣಪುಟ್ಟ‌ ಕಾರಣಗಳ ನೆಪವೊಡ್ಡಿ ಅನೇಕ ವರ್ಷಗಳಿಂದ ಆರಂಭಿಸಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳಡಿ ವಸತಿ ಕಲ್ಪಿಸುವಂತೆ ಸರಕಾರದಿಂದ ನಿರ್ದೇಶನ ಬಂದಿರುತ್ತದೆ. ಆ ಪ್ರಕಾರ ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ 262 ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 26 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಇದಲ್ಲದೇ ಅಗತ್ಯ ಮೇವು ಖರೀದಿಗೆ ಟೆಂಡರ್ ಕೂಡ ಕರೆಯಲಾಗಿದೆ. ಮೇವು ಖರೀದಿಗೆ ಸಾಕಷ್ಟು ದುಡ್ಡು ಕೂಡ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಹೊರಗುತ್ತಿಗೆ ನೌಕರರ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವುದನ್ನು ತಪ್ಪಿಸಲು ಎಲ್ಲ ಇಲಾಖೆಯವರು ಎರಡು ತಿಂಗಳು ಮುಂಚಿತವಾಗಿಯೇ ಪ್ರಕ್ರಿಯೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 3.72 ಲಕ್ಷ ರೈತರ ಪೈಕಿ 3.40 ಲಕ್ಷ ರೈತರಿಗೆ ಇತ್ತೀಚೆಗೆ ಬರದಿಂದ ಉಂಟಾಗಿರುವ ಬೆಳೆಹಾನಿ ಪರಿಹಾರವು ಜಮೆ ಮಾಡಲಾಗಿರುತ್ತದೆ.

ಫ್ರುಟ್ಸ್ ತಂತ್ರಾಂಶದಲ್ಲಿ ನೋಂದಣಿ ಹಾಗೂ ಖಾತೆ ವಿವರಗಳ ಹೊಂದಾಣಿಕೆಯಾಗದಿರುವುದರಿಂದ ಇನ್ನೂ 21 ಸಾವಿರ ರೈತರಿಗೆ ಪರಿಹಾರ ನೀಡುವುದು ಬಾಕಿ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹತ್ತು ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಜಿಲ್ಲೆಯ ಹದಿನೈದು ತಹಶೀಲ್ದಾರರ ಖಾತೆಯಲ್ಲಿ ತಲಾ ಒಂದು ಕೋಟಿ ರೂಪಾಯಿಯಂತೆ ಅನುದಾನ ಲಭ್ಯವಿರುತ್ತದೆ. ಆದ್ದರಿಂದ ಕುಡಿಯುವ ನೀರು ಪೂರೈಕೆ ಹಾಗೂ ಬರ ನಿರ್ವಹಣೆಗೆ ಹಣಕಾಸಿನ ತೊಂದರೆಯಿಲ್ಲ ಎಂದು ಹೇಳಿದರು.

ಬೆಳಗಾವಿ-ಧಾರವಾಡ ರೈಲುಮಾರ್ಗ ಕಾಮಗಾರಿ:

ಭೂಸ್ವಾಧೀನ ಹಾಗೂ ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ರೈತರ ಪ್ರತಿಭಟನೆಯಿಂದಾಗಿ ಬೆಳಗಾವಿ-ಧಾರವಾಡ ರೈಲುಮಾರ್ಗ; ಎಸ್.ಟಿ.ಪಿ. ಸೇರಿದಂತೆ ಅನೇಕ ಪ್ರಮುಖ ಯೋಜನೆಗಳು ವಿಳಂಬಗೊಳ್ಳುತ್ತಿವೆ. ಆದ್ದರಿಂದ ಈ ಯೋಜನೆಗಳ ಸಮರ್ಪಕ‌ ಅನುಷ್ಠಾನಕ್ಕಾಗಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಈಗಾಗಲೇ ಎಸ್.ಟಿ.ಪಿ. ಕಾಮಗಾರಿಗಳು ಮುಕ್ತಾಯದ ಹಂತದಲ್ಲಿರುವುದರಿಂದ ಯೋಜನೆ ಅನುಷ್ಠಾನಗೊಳಿಸುವುದು ಅನಿವಾರ್ಯ ಎಂದು ಸಚಿವರು ಅಭಿಪ್ರಾಯಪಟ್ಟರು.

ತೇಗೂರದಿಂದ ದೇಸೂರವರೆಗೆ ಮಾರ್ಗ ನಿರ್ಮಾಣವಾಗುತ್ತಿದೆ. ದೇಸೂರ-ಕಣವಿನಕೊಪ್ಪ ನಡುವೆ 150 ಎಕರೆ ನೀರಾವರಿ ಭೂಮಿ ಇರುವುದರಿಂದ ಮಾರ್ಗ ಬದಲಾಯಿಸುವಂತೆ ರೈತರು ಕೋರಿರುತ್ತಾರೆ.
ಮಾರ್ಗ ಬದಲಾವಣೆ ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿರುವುದರಿಂದ ರೈತರಿಗೆ ಹೆಚ್ಚುವರಿ ಪರಿಹಾರ ನೀಡುವ ಕುರಿತು ಹಲವಾರು ಬಾರಿ ಸಭೆ ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

608 ರ ಪೈಕಿ 444 ರಲ್ಲಿ ಕೆಲಸ ಆರಂಭಗೊಂಡಿದ್ದು, ಕೇವಲ 150 ಎಕರೆ ಜಮೀನು ಸ್ವಾಧೀನದ ಬಗ್ಗೆ ಮಾತ್ರ ಸಮಸ್ಯೆ ಉದ್ಭವಿಸಿದೆ ಎಂದು ಭೂಸ್ವಾಧೀನಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.

ಈಗಾಗಲೇ ಕಾಮಗಾರಿ ಆರಂಭಗೊಂಡಿರುವುದರಿಂದ ಆದಷ್ಟು ಬೇಗನೇ ಇನ್ನುಳಿದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಂಸದೆ ಮಂಗಲ‌ ಅಂಗಡಿ ತಿಳಿಸಿದರು.

ಬೆಳಗಾವಿ-ಧಾರವಾಡ ರೈಲು ಯೋಜನೆ ಮಹತ್ವದ ಯೋಜನೆಯಾಗಿದೆ. ಆದ್ದರಿಂದ ಸಮಸ್ಯೆ ಇರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಯೋಜನೆ ವಿಳಂಬವಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಜಿಲ್ಲೆಯಲ್ಲಿ ಬಹುತೇಕ ಅಂಬೇಡ್ಕರ್ ಭವನಗಳ ದುರಸ್ತಿ ಕಾಮಗಾರಿಗಳನ್ನು ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಉಳಿದ ಭವನಗಳನ್ನು ಮುಂದಿನ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

280 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸ್ವಂತ ಟ್ಯಾಂಕರ್ ಖರೀದಿಸಲಾಗಿದ್ದು, ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಒಂದು ತಿಂಗಳಿನಲ್ಲಿ ಟ್ಯಾಂಕರ್ ಖರೀದಿಸಲಾಗುವುದು ಎಂದು ವಿವರಿಸಿದರು.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ಸಮಸ್ಯೆ ನಿತಗವಹಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಖಾಸಗಿ ಬಾವಿಗಳನ್ನು ಗುರುತಿಸಲಾಗಿದ್ದು, ಆಯವ್ಯಯದಲ್ಲೂ ಅನುದಾನ ತೆಗೆದಿರಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಗಳನ್ನು ಕೂಡ ಖರೀದಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪಿ‌‌ಎನ್.ಲೋಕೇಶ್ ವಿವರಿಸಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಎಂ.ನಾಗರಾಜ್ ಯಾದವ ಅವರು, ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗದಿರುವ ಅಂಬೇಡ್ಕರ್ ಭವನಗಳ ದುರಸ್ತಿಯನ್ನು ಅಧಿಕಾರಿಗಳು ಖಚಿತಪಡಿಸಬೇಕು ಎಂದು ಹೇಳಿದರು.
ಅದೇ ರೀತಿ ಸಾಕಷ್ಟು ಮೇವು ದಾಸ್ತಾನು ಕೂಡ ಲಭ್ಯವಿಟ್ಟುಕೊಳ್ಳಬೇಕು ಎಂದರು.

 

ಸಂಸದೆ ಮಂಗಲ ಅಂಗಡಿ, ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ, ಬೆಳಗಾವಿ(ಉತ್ತರ) ಶಾಸಕ ಆಸಿಫ್(ರಾಜು) ಸೇಠ್, ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅನುಕಂಪ ಆಧಾರಿತವಾಗಿ ನೇಮಕಗೊಂಡ ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನೇಮಕಾತಿ ಆದೇಶಪತ್ರವನ್ನು ವಿತರಿಸಿದರು.

error: Content is protected !!