ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದ್ದ ವಾಜಪೇಯಿ : ಕಿರಣ ಜಾಧವ
ಬೆಳಗಾವಿ-25:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕಾರಣದ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದರು. ಅವರು ತಮ್ಮ ಅವಧಿಯಲ್ಲಿ ಶ್ರೇಷ್ಠ ಕೆಲಸದ ಮೂಲಕ ದೇಶವನ್ನು ಗುರುತಿಸುವಂತೆ ಮಾಡಿದ್ದರು ಎಂದು ಬಿಜೆಪಿ ಯುವ ಮುಖಂಡ ಹಾಗೂ ವಿಮಲ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಕಿರಣ ಜಾಧವ ಹೇಳಿದರು.
ನಗರದ ದತ್ತಿ ಸಂಸ್ಥೆಯಾದ ವಿಮಲ್ ಫೌಂಡೇಶನ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ವಾಜಪೇಯಿ ಅವರು ರಾಜಕಾರಣಿ ಮತ್ತು ವ್ಯಕ್ತಿ ಹೇಗಿರಬೇಕು ಎಂಬುದನ್ನು ತಮ್ಮ ಜೀವನ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರೊಬ್ಬ ಶ್ರೇಷ್ಠ ಹಾಗೂ ಮಾದರಿ ಜನ ನಾಯಕರಾಗಿದ್ದರು ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ರಾಜಕೀಯದಲ್ಲಿ ಆದರ್ಶ ಸೃಷ್ಟಿಸಿದ್ದಾರೆ. ಅವರು ರಾಜಕೀಯಕ್ಕೆ ಸಾಮಾಜಿಕ ಕಳಕಳಿಯ ರೂಪ ನೀಡುವಾಗ ಜನರ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಗೆ ಮಾತ್ರ ಆದ್ಯತೆ ನೀಡಿದ್ದರು. ರಸ್ತೆ ಸಂಪರ್ಕ ಯೋಜನೆಯಾಗಲಿ ಅಥವಾ ಪೋಖ್ರಾನ್ ಪರಮಾಣು ಪರೀಕ್ಷೆಯಾಗಲಿ ಅವರು ಅಸಾಧ್ಯವಾದುದನ್ನು ಸಾಧಿಸಿದರು. ಜೈ ಜವಾನ್, ಜೈ ಕಿಸಾನ್ ಘೋಷಣೆಗಳ ಜತೆಗೆ ಜೈ ವಿಜ್ಞಾನ ಎಂಬ ಘೋಷಣೆಯನ್ನೂ ಹಾಕಿದರು. ಯುವ ಪೀಳಿಗೆ ರಾಜಕೀಯ ಕ್ಷೇತ್ರದಲ್ಲಿ ಅವರ ಆದರ್ಶವನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಕಿರಣ್ ಜಾಧವ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು. ವಿಮಲ್ ಫೌಂಡೇಶನ್ ನ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.