13/06/2026
IMG-20260531-WA0017

ಬೆಳಗಾವಿ-31 : ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಕಾಯ್ದೆ (KPCEA-2024) ಯನ್ನು ತ್ವರಿತವಾಗಿ ಸಂಪೂರ್ಣ ಅನುಷ್ಠಾನಗೊಳಿಸಿ, ವೃತ್ತಿಪರ ನಾಗರಿಕ ಅಭಿಯಂತರರ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ಬೆಳಗಾವಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಪದಾಧಿಕಾರಿಗಳು, ಕಾಯ್ದೆ ಜಾರಿಗೆ ಮಹತ್ವದ ಪಾತ್ರ ವಹಿಸಿದ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಸತೀಶ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರ ಸುರಕ್ಷತೆ, ಕಟ್ಟಡಗಳ ಸದೃಢತೆ, ಬಾಳಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಐತಿಹಾಸಿಕ ಕಾಯ್ದೆ ದೇಶದಲ್ಲೇ ಮೊದಲನೆಯದಾಗಿದೆ ಎಂದು ತಿಳಿಸಿದರು.
ಕಾಯ್ದೆಯಡಿ ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಮಂಡಳಿ (KCPCE) ರಚನೆಯಾಗಿದ್ದು, ಮಂಡಳಿ ಕಾರ್ಯಾರಂಭಕ್ಕೆ ಸಂಪೂರ್ಣ ಸಿದ್ಧವಾಗಿದೆ. ಆದರೆ ಕಾಯ್ದೆ ಜಾರಿಯಾಗಿ ಸುಮಾರು 20 ತಿಂಗಳುಗಳು ಕಳೆದಿದ್ದರೂ ವೃತ್ತಿಪರ ನಾಗರಿಕ ಅಭಿಯಂತರರ ನೋಂದಣಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ನಿಯಮಾವಳಿ ಅಂತಿಮಗೊಳಿಸುವಿಕೆ ಹಾಗೂ ಅಗತ್ಯ ಆಡಳಿತಾತ್ಮಕ ಅನುಮೋದನೆಗಳಲ್ಲಿ ಉಂಟಾಗಿರುವ ವಿಳಂಬವೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಕಾಯ್ದೆಯಲ್ಲಿ ಮಂಡಳಿಗೆ ಕಚೇರಿ ಸೌಲಭ್ಯ ಒದಗಿಸುವ ಬಗ್ಗೆ ಸ್ಪಷ್ಟ ಉಲ್ಲೇಖವಿದ್ದರೂ, ಇದುವರೆಗೆ ಅಗತ್ಯ ಕಚೇರಿ ವ್ಯವಸ್ಥೆ ಕಲ್ಪಿಸದಿರುವುದು ವಿಷಾದನೀಯವಾಗಿದೆ. ಮಂಡಳಿಯು ನೋಂದಣಿ ಪ್ರಕ್ರಿಯೆ ಆರಂಭಿಸಲು ಬೇಕಾದ ಎಲ್ಲ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ನಿಯಮಾವಳಿಗಳ ಅನುಮೋದನೆ, ಆಡಳಿತಾತ್ಮಕ ಅನುಮತಿಗಳು ಹಾಗೂ ಕಚೇರಿ ಸೌಲಭ್ಯಗಳನ್ನು ತುರ್ತು ಆದ್ಯತೆಯ ಮೇರೆಗೆ ಒದಗಿಸಿ, ನೋಂದಣಿ ಪ್ರಕ್ರಿಯೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಮಂಡಳಿಯ ಪರಿಣಾಮಕಾರಿ ಕಾರ್ಯನಿರ್ವಹಣೆಯಿಂದ ಸಾರ್ವಜನಿಕರಿಗೆ ಸುರಕ್ಷಿತ ಕಟ್ಟಡಗಳು ಮತ್ತು ಮೂಲಸೌಕರ್ಯಗಳು ಲಭ್ಯವಾಗಲಿದ್ದು, ನಿರ್ಮಾಣ ಕ್ಷೇತ್ರದಲ್ಲಿ ವೃತ್ತಿಪರ ಹೊಣೆಗಾರಿಕೆ ಹೆಚ್ಚಲಿದೆ. ಅಲ್ಲದೆ ಅನರ್ಹ ವ್ಯಕ್ತಿಗಳು ಹಾಗೂ ನಕಲಿ ವೃತ್ತಿಪರರ ಹಾವಳಿಗೆ ಕಡಿವಾಣ ಬೀಳಲಿದ್ದು, ಸುಸ್ಥಿರ ಅಭಿವೃದ್ಧಿ ಮತ್ತು ಸಮಾಜದ ಹಿತಾಸಕ್ತಿ ಕಾಪಾಡಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರವು ಈ ವಿಷಯವನ್ನು ಅತ್ಯಂತ ಆದ್ಯತೆಯಿಂದ ಪರಿಗಣಿಸಿ, ಕರ್ನಾಟಕ ವೃತ್ತಿಪರ ನಾಗರಿಕ ಅಭಿಯಂತರರ ಕಾಯ್ದೆ-2024ರ ಸಂಪೂರ್ಣ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಬೆಳಗಾವಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಆಗ್ರಹಿಸಿತು.
ಈ ವೇಳೆ ಇಂಜಿನಿಯರ್ಗಳಾದ ಅಜಿತ್ ಕುಮಾರ್ ಎಸ್. ಮಗದುಮ್, ರಮೇಶ್ ತುಬಚಿ, ಎಸ್.ಎ. ಪಾಟೀಲ, ಅರುಣ್ ಶಿರಾಪುರ್, ಆದರ್ಶ್ ಪಿ.ಎಸ್. ಹಿರೇಮಠ ಹಾಗೂ ಅಜಯ್ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!