ಬೆಳಗಾವಿ-13 : ಮಹಿಳಾ ಸಬಲೀಕರಣದ ದಿಸೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ನಾರಿ ಶಕ್ತಿ ವಂದನಾ’ ಕಾಯ್ದೆ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಹೆಜ್ಜೆಯಾಗಿದೆ ಎಂದು ಮಾಜಿ ಸಚಿವೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ಧಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಭಾರತದಲ್ಲಿ ಮೊದಲ ಬಾರಿಗೆ ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ ಎಂದರು.
ಈ ಕಾಯ್ದೆಯಿಂದ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತೇಜನ ಸಿಗಲಿದ್ದು, ಮಹಿಳೆಯರ ಪಾತ್ರವು ಮತ್ತಷ್ಟು ಬಲವಾಗಲಿದೆ. ದೇಶದ ಪ್ರಮುಖ ನಿರ್ಧಾರಗಳಲ್ಲಿ ಮಹಿಳೆಯರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಹೆಚ್ಚಲಿದೆ. ಸ್ಥಳೀಯ ಸಮಸ್ಯೆಗಳನ್ನು ಲೋಕಸಭೆಯ ಮಟ್ಟಕ್ಕೆ ಕೊಂಡೊಯ್ಯಲು ಇದು ಸಹಾಯಕವಾಗಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮತದಾನದ ಪ್ರಮಾಣವೂ ಹೆಚ್ಚಾಗಿದೆ. ‘ಸುಕನ್ಯಾ ಸಮೃದ್ಧಿ’, ‘ಬೇಟಿ ಬಚಾವೋ ಬೇಟಿ ಪಡಾವೋ’ ಸೇರಿದಂತೆ ಹಲವಾರು ಮಹಿಳಾ ಹಿತಾಸಕ್ತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು.
ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆಯವರೆಗೆ ಮಹಿಳೆಯರಿಗೆ ಅವಕಾಶ ನೀಡಿದಾಗ ಮಾತ್ರ ವಿಕಸಿತ ಭಾರತದ ಪರಿಕಲ್ಪನೆ ಸಾಕಾರಗೊಳ್ಳಲಿದೆ. ‘ನಾರಿ ಶಕ್ತಿ ವಂದನಾ’ ಕಾಯ್ದೆ ಮಹಿಳೆಯರಿಗೆ ಗೌರವವನ್ನು ಹೆಚ್ಚಿಸುವುದರ ಜೊತೆಗೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ಸಹಾಯಕವಾಗಲಿದೆ ಎಂದರು.
2028ರ ವೇಳೆಗೆ ಈ ಕಾಯ್ದೆಯ ಅನ್ವಯ ಬೆಳಗಾವಿ ಜಿಲ್ಲೆಯಿಂದಲೇ ಸುಮಾರು 6 ಮಹಿಳಾ ಶಾಸಕರು ವಿಧಾನಸಭೆಗೆ ಪ್ರವೇಶಿಸುವ ಅವಕಾಶ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಒನ್ ನೇಷನ್, ಒನ್ ಎಲೆಕ್ಷನ್’ ಪರಿಕಲ್ಪನೆಗೂ ಇದು ಪೂರಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷೆ ಗೀತಾ ಸುತಾರ್, ಉಜ್ವಲಾ ಬಡವಣ್ಣಾಚೆ, ಶಿಲ್ಪಾ ಕೇಕರೆ ಸೇರಿದಂತೆ ಇತರರು ಹಾಜರಿದ್ದರು.
