ಬೆಳಗಾವಿ-04 : ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಸಿಗಬೇಕು ಮತ್ತು ಚಿಕಿತ್ಸೆ ಬಡವರ ಹಕ್ಕಾಗಬೇಕು ಎಂಬ ಒತ್ತಾಯದೊಂದಿಗೆ ರಾಜ್ಯದಲ್ಲಿ ಬೃಹತ್ ಜನಪರ ಚಳವಳಿ ಆರಂಭವಾಗಿದೆ. ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಹಕ್ಕಿನ ಜಾಥಾ ಮೂಲಕ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿದರು.
ಕರ್ನಾಟಕದಲ್ಲಿ ಆರೋಗ್ಯ ಎಲ್ಲರ ಹಕ್ಕಾಗಬೇಕು ಎಂಬ ಉದ್ದೇಶದೊಂದಿಗೆ ಆರೋಗ್ಯ ಎಲ್ಲರ ಹಕ್ಕು, ಉಚಿತ ಔಷಧ ಲಭ್ಯತೆ ಮಾನವ ಹಕ್ಕು ಎಂಬ ಘೋಷವಾಕ್ಯದೊಂದಿಗೆ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಹಕ್ಕಿನ ಜಾಥಾ ನಡೆಸಲಾಯಿತು.
ಬಳಿಕ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಾ. ಗೋಪಾಲ್ ಧಾಬಡ ಅವರು, ಕಳೆದ ವರ್ಷ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳಪೆ ಔಷಧದಿಂದ ತಾಯಂದಿರು ಮೃತಪಟ್ಟ ಘಟನೆ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇದರಿಂದಾಗಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸರಕಾರಕ್ಕೆ ಪ್ರಮುಖ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುತ್ತದೆ ಎಂದರು.
ಜಾಥಾದ ಪ್ರಮುಖ ಬೇಡಿಕೆಗಳೆಂದರೆ : ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಗಳು ಸಂಪೂರ್ಣ ಉಚಿತವಾಗಿ ದೊರೆಯಬೇಕು ಮತ್ತು ವೈದ್ಯರು ಹೊರಗಿನ ಅಂಗಡಿಗಳಿಗೆ ಔಷಧ ಬರೆಯುವುದನ್ನು ನಿಲ್ಲಿಸಬೇಕು. ರಾಜಸ್ಥಾನ ಮಾದರಿಯಲ್ಲಿ ಕರ್ನಾಟಕದಲ್ಲೂ ‘ಆರೋಗ್ಯ ಹಕ್ಕು ಕಾಯ್ದೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕಕ್ಕೆ ಮಿತಿ ಹೇರಬೇಕು ಹಾಗೂ ಏಳು ಜಿಲ್ಲಾ ಆಸ್ಪತ್ರೆಗಳನ್ನು ಪಿಪಿಪಿ (PPP) ಮಾದರಿಯಲ್ಲಿ ಖಾಸಗೀಕರಣ ಮಾಡುವ ಸರಕಾರದ ನಿರ್ಧಾರವನ್ನು ಕೂಡಲೇ ಕೈಬಿಡಬೇಕು, ಈ ಹೋರಾಟವು ಕೇವಲ ಜಾಥಾಕ್ಕೆ ಸೀಮಿತವಾಗದೆ, ಜನಸಾಮಾನ್ಯರಿಗೆ ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ ಎಂದು ಸಂಘಟಕರು ಎಚ್ಚರಿಸಿದರು.
ಈ ವೇಳೆ ಡಾ.ಗೋಪಾಲ ದಾವಡೆ,ಪ್ರಸನ್ನ ಕುಮಾರ್, ವೈಶಾಲಿ, ಡಾ. ಪವಾರ ಎಸ್ ಎಸ್, ದುರುಗೇಶ್ ಬಸವ ಶೀವಕೇರಿ ಸುರ್ವಣ ಕುಟಾಳೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
