ಬೆಳಗಾವಿ-07 : ಯೋಗವು ಧ್ಯಾನ ಮತ್ತು ಸಂಕಲ್ಪದ ಮುಖ್ಯ ಮೂಲವಾಗಿದೆ. ಧ್ಯಾನ ಹಾಗೂ ದಿವ್ಯ ಪರಮಾತ್ಮನ ಸತತ ಸ್ಪರಣೆ ಆತ್ಮಶುದ್ಧಿಗೆ ರಹದಾರಿ ಎಂದು ನವದೆಹಲಿಯ ಹೃದಯ ತಜ್ಞವೈದ್ಯ ಹಾಗೂ ರಾಜಯೋಗಿ ಡಾ. ಮೋಹಿತ್ ಗುಪ್ತಾ ಹೇಳಿದರು.
ಶನಿವಾರ ನಗರದ ಮಹಾಂತೇಷ ನಗರದ ಬ್ರಹ್ಮಕುಮಾರೀಸ್ ಮುಖ್ಯ ಕೇಂದ್ರದಲ್ಲಿ ನಡೆದ ‘ದಿ ಪವರ್ ಆಪ್ ಒನ್ ಥಾಟ್” (ಒಂದು ಆಲೋಚನೆಯ ಶಕ್ತಿ) ವಿಷಯದ ಕುರಿತು ನಡೆದ ಸುವಿಚಾರ ಸಭೆ ಉದ್ದೇಶಿಸಿ ಮಾತನಾಡಿದರು. ಜೀವನವನ್ನು ಜೀವಿಸಲು ಇಂದು ಮಾನವ ಆಯ್ದುಕೊಂಡ ಮಾರ್ಗ ಅಶಾಂತಿ, ಉದ್ವೇಗ, ಅವಸರ, ದ್ವೇಷ, ಅಸೂಯೆ, ಅನುರಾಗ ಹಾಗೂ ಪ್ರತಿಷ್ಠೆ ಆಯ್ಕೆ ಮಾಡಿಕೊಂಡಿದ್ದಾನೆ. ನಾವು ನಿಜವಾದ ಖುಷಿಯನ್ನು ಅರಿಯದೇ, ನಮ್ಮಆತ್ಮ ಖುಷಿಯನ್ನು ಮುಂದೂಡುತ್ತ ಅಶಾಂತಿಯ ಜೀವನ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಡಾ. ಗುಪ್ತಾ ಬೇಸರ ವ್ಯಕ್ತಪಡಿಸಿದರು. ನಮ್ಮ ಸಂಕಲ್ಪಗಳನ್ನಉ ಬದಲಿಸಿಕೊಳ್ಳಲು ಕಲಿತಾಗ ಮಾತ್ರ ದೇಹದ ಸಂಕಲ್ಪ, ಸಂಬಂಧಗಳ ಸಂಕಲ್ಪ, ಪರಿಸರದ ಸಂಕಲ್ಪ ಬದಲಿಸಿಕೊಳ್ಳಲು ಸಾಧ್ಯ. ನೂರಕ್ಕೆ 95ರಷ್ಟು ನಮ್ಮ ದೈನಂದಿನ ವಿಚಾರಗಳು ಖುಣಾತ್ಮಕವಾಗಿ ಕೂಡಿವೆ. ಸಾಧ್ಯವಾದಷ್ಟು ಧನಾತ್ಮಕ ವಿಚಾರ ಅಳವಡಿಸಿಕೊಂಡಾಗ ಮಾನವ ಜನ್ಮ ದಿವ್ಯತೆಯೆಡೆಗೆ ಬದಲಾಗುತ್ತದೆ. ಜಂಜಾಟದ ಜೀವನದ ಹಿಂದೆ ಬಿದ್ದು ಆತ್ಮಸಾಕ್ಷಾತ್ಕಾರ ಮರೆತರೆ ಮಾನವ ಸಂಕುಲಕ್ಕೆ ಒಳಿತಾಗದು. ಅಶುದ್ಧ ವಿಚಾರ, ಅಶುದ್ಧ ಜೀವನಶೈಲಿಯಿಂದ ಆರೋಗ್ಯ ಹಾಗೂ ಆಯುಷ್ಯದ ಕಡಿಮೆಯಾಗುತ್ತ ಸಾಗಿದೆ ಎಂದರು.
ಹಣ, ಬಂಗಲೆ, ಪ್ರತಿಷ್ಠೆಯ ಸೌಕರ್ಯಗಳ ಹಿಂದೆ ಬಿದ್ದರೆ ನಿಜವಾದ ಜೀವನ ಸೌಖ್ಯ ಸಿಗಲಾರದು.
ಇನ್ನೊಬ್ಬರ ಭಾವನೆ ಅರಿಯಲು, ಪರಸ್ಪರರೊಂದಿಗೆ ಬೆರೆಯಲು, ವಿಚಾರ ವಿನಿಮಯ ಮಾಡಿಕೊಳ್ಳಲು, ಪ್ರೀತಿ ವಿಶ್ವಾಸ ಹಂಚಿಕೊಳ್ಳಲು ಕಲಿತಾಗ ಸುಖ ಶಾಂತಿ ಸೌಖ್ಯ ಸಿಗುತ್ತದೆ ಎಂದರು. ನನಗೆ ಸಮಯವಿಲ್ಲ ಎಂಬ ಹಣದ ಹಿಂದೆ ಓಡುವ ಜಂಜಾಟ ಅದು ಶುದ್ಧ ಜೀವನವಲ್ಲ, ಅದರಿಂದ ಅನಾರೋಗ್ಯ ಹಾಗೂ ಅಲ್ಪಾಯುವಿಗೆ ಕಾರಣವಾಗಿತ್ತಿದೆ ಎಂದು ರಾಜಯೋಗ ಹಾಗೂ ವೈಜ್ಞಾನಿಕ ವಿಚಾರಗಳ ಪ್ರಸ್ತುತಪಡಿಸಿ ಎಚ್ಚರಿಸಿದರು.
ಬ್ರಹ್ಮಕುಮಾರೀಸ್ ಬೆಳಗಾವಿ ಮುಖ್ಯ ಕೇಂದ್ರದ ಮುಖ್ಯಸ್ಥರಾದ ರಾಜಯೋಗಿನಿ ಅಂಬಿಕಾ ದೀದಿ ಅವರು ಆಶೀರ್ವಚನ ನೀಡಿ ಸೃಷ್ಟಿಕರ್ತ ಏಕೈಕ ಶಿವನ ಯತಾರ್ಥ ಸ್ಮರಣೆಯಿಂದ ಜೀವನ ಸಾರ್ಥಕವಾಗುತ್ತದೆ. ಸ್ವಯಂ ಆತ್ಮವನ್ನು ಅರಿತುಕೊಳ್ಳುವುದರಿಂದ ಜಗವನ್ನೆಲ್ಲ ನಾವು ಅರಿಯಲು ಸಾಧ್ಯ. ತೀರ್ಥಕ್ಷೇತ್ರ ಯಾತ್ರೆ ಹಾಗೂ ಪುಣ್ಯ ನದಿಗಳ ಸ್ನಾನದಿಂದ ದೇಹ ಶುದ್ಧಗೊಳ್ಳುತ್ತದೆ. ಅದರಂತೆ ಆತ್ಮ ಶುದ್ಧಿಗೆ ಪರಮ ಆತ್ಮ ಶಿವನ ಸತತ ಸ್ಮರಣೆ ಹಾಗೂ ಧ್ಯಾನದಿಂದ ಮಾತ್ರ ಸಾಧ್ಯ. ನಾಗರಿಕ ಸಮಾಜದ ಬುದ್ಧಿಜೀವಿಗಳಾದ ನಾವು ಸ್ವಸ್ಥ ಸಮಾಜ ನಿರ್ಮಾಣಕ್ಕೆ, ಆತ್ಮವಿಮರ್ಷೆ ಮಾಡಿಕೊಳ್ಳಲು ಪರಮಪಿತನ ಧ್ಯಾನ ಬಹುಮುಖ್ಯ ಎಂದರು. ನಮ್ಮ ದೇಹಕ್ಕೆ ನೀರು, ಆಹಾರ, ನಿದ್ದೆ ಹೇಗೆ ಅತ್ಯವಶ್ಯವೋ ಹಾಗೇ ಧ್ಯಾನವು ಆತ್ಮಶುದ್ಧಿ, ಸಾಕ್ಷಾತ್ಕಾರಕ್ಕೆ ರಹದಾರಿ ಆಗಿದೆ ಎಂದರು. ನೂರಾರು ಸಂಖ್ಯೆಯಲ್ಲಿ ಶ್ರದ್ಧಾಳು ರಾಜಯೋಗಿಗಳು ಭಾಗವಹಿಸಿದರು.
