ಬೆಳಗಾವಿ-05: ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಕೋಳಿ ಬೆಸ್ತ ಸಮುದಾಯದ ಬೇಡಿಕೆಯಂತೆ ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿ ಸೇರ್ಪಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ನಗರದ ಸರ್ದಾರ ಹೈಸ್ಕೂಲ್ ಮೈದಾನದಲ್ಲಿ ರವಿವಾರ (ಫೆ.04) ನಡೆದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಜ ಶರಣ ಅಂಬಿಗರ ಚೌಡಯ್ಯನವರ 904 ನೇ ಜಯಂತಿ ಆಚರಣೆ ಕಾರ್ಯಕ್ರಮ ಇಷ್ಟು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಚೌಡಯ್ಯನವರ ನೇರ ಮಾತಿನಿಂದ ಅವರಿಗೆ ನಿಜ ಶರಣ ಎಂದು ಹೆಸರು ಬಂದಿದೆ. ನೇರ ನುಡಿ ಮೂಲಕ ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಜಾತಿ, ಮತ ಹೋಗಲಾಡಿಸಿ ಸಮಾನತೆಗೆ ನಿರಂತರ ಶ್ರಮಿಸಿದ್ದಾರೆ. ಪ್ರತಿಯೊಬ್ಬರೂ ಅವರ ವಚನ ಸಾಹಿತ್ಯ, ಚಿಂತನೆಗಳನ್ನು ಅಭ್ಯಾಸ ನಡೆಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್. ಟಿ ಮೀಸಲಾತಿ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನ:
ಅಂಬಿಗರ ಚೌಡಯ್ಯನವರ ಸಮಾಜ ಕೋಳಿ ಬೆಸ್ತ, ಕಬ್ಬಲಿಗ, ಅಂಬಿಗ ಸೇರಿದಂತೆ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದೆ. ಸಮಾಜದ ಬೇಡಿಕೆಯಂತೆ ಎಸ್.ಟಿ ಮೀಸಲಾತಿ ಸೇರ್ಪಡೆಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ತೀರ್ಮಾನ ಈಗ ಕೇಂದ್ರ ಸರ್ಕಾರದ ಹಂತದಲ್ಲಿದೆ ಎಂದು ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ ಸಮಾಜದ ಮುಖಂಡರೊಡನೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ನೆಲ ಬೇಟೆಗಾರರು ಹಾಗೂ ಜಲ ಬೇಟೆಗಾರುರು ಎರಡು ಒಂದೇ. ಆದರೆ ಕೋಳಿ ಬೆಸ್ತ ಸಮುದಾಯ ಹೆಸರುಗಳಿಂದ ಗುರುತಿಕೊಂಡಿರುವುದರಿಂದ ಎಸ್.ಟಿ. ಪಟ್ಟಿಗೆ ಸೇರ್ಪಡೆಗೆಗೊಂಡಿಲ್ಲ. ಬರುವ ದಿನಗಳಲ್ಲಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ಚಿಂತನೆ ನಡೆಸಲಾಗುವುದು ಎಂದು ಜಾರಕಿಹೊಳಿ ಹೇಳಿದರು.
ಸಮಾಜ ಸಮಗ್ರ ಅಭಿವೃದ್ದಿ ಹೊಂದಬೇಕು:
ಇಂತಹ ಜಯಂತಿಗಳ ಮೂಲಕ ಶೋಷಿತ ಸಮುದಾಯದ ಜನರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಶೈಕ್ಷಣಿಕ ಆರ್ಥಿಕ ಬೆಳವಣಿಗೆ ಹೊಂದಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಇದಕ್ಕೂ ಮುಂಚೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಳಿತಕ್ಕೆ ಒಳಗಾದ ಸಮಾಜದ ಒಳಿತಿಗಾಗಿ ನಿರಂತರ ಶ್ರಮಿಸಿದ್ದಾರೆ. 12 ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತ ಭೇದ ಭಾವದ ತಾರತಮ್ಯಗಳನ್ನು ಹೋಗಲಾಡಿಸಿ ಸಮಾನತೆಯ ದಾರಿ ತೋರಿಸಿಕೊಟ್ಟಿದ್ದಾರೆ.
ಬಸವಣ್ಣನವರ ವಿಚಾರ; ಚೌಡಯ್ಯನವರ ವಚನ ಸಾಹಿತ್ಯ:
ಮೌಡ್ಯ, ಜಾತಿ ಪದ್ಧತಿ ಹೋಗಲಾಡಿಸಿ, ಎಲ್ಲ ಸಮುದಾಯವನ್ನು ಒಗ್ಗೂಡಿಸಿ ಮಾನವೀಯತೆಯೇ ಮೂಲ ಎಂದು ಜನರಿಗೆ ಅರಿವು ಮಾಡಿಕೊಟ್ಟಿದ್ದಾರೆ. ಬಸವಣ್ಣನವರ ವಿಚಾರ ಧಾರೆಯಂತೆ ಅಂಬಿಗರ ಚೌಡಯ್ಯನವರ ತಮ್ಮ ವಚನ ಸಾಹಿತ್ಯ ಮೂಲಕ ಏಕತೆಯ ಸಂದೇಶವನ್ನು ಸಾರಿದ್ದಾರೆ.
ಸಮುದಾಯದಿಂದ ಪರಿಶಿಷ್ಟ ಪಂಗಡದ ಮೀಸಲಾತಿ ಪಡೆಯಲು ಬಹಳ ವರ್ಷಗಳಿಂದ ಬೇಡಿಕೆ ಇದೆ ಅವರ ಬೇಡಿಕೆಗೆ ಪೂರಕವಾಗಿ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದು ಸಚಿವೆ ಹೆಬ್ಬಾಳಕರ ಅವರು ಭರವಸೆ ನೀಡಿದರು.
ನಿಜ ಶರಣ ಅಂಬಿಗರ ಚೌಡಯ್ಯನವರದ್ದು ವಿಶಿಷ್ಟ ವ್ಯಕ್ತಿತ್ವ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ.
ವಚನಗಳ ರಚನೆ, ಭಾಷಾ ಶೈಲಿ ಗಮನಿಸಿದರೆ ಅವರು ಕೆಚ್ಚೆದೆಯ, ನಿಷ್ಠುರ ಒರಟು ವಚನಕಾರ ಎಂಬುದು ಸ್ಪಷ್ಟವಾಗುತ್ತದೆ. ಅವರ ಆದರ್ಶಗಳ ಎಲ್ಲರೂ ಅಳವಡಿಸಿಕೊಳ್ಳಬೇಕು ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಅಧ್ಯಕ್ಷ ದಿಲೀಪ ಕುರಂದವಾಡೆ ಎಂದು ಹೇಳಿದರು.
ರಾಮಯಣ ಬರೆದ ಮಹರ್ಷಿ ವಾಲ್ಮೀಕಿಯವರ ದೊಡ್ಡ ಇತಿಹಾಸವಿದೆ. ಅದೇ ರೀತಿಯಲ್ಲಿ ಮಹಾಭಾರತ ರಚಿತ ಮಹರ್ಷಿ ವ್ಯಾಸರು ದೇಶಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಅವರು ಸಹ ಕೋಳಿ ಬೆಸ್ತ ಸಮುದಾಯದವರು. ಸಮಾಜದ ಬಾಂಧವರು ತಮ್ಮ ಮೂಲಗಳನ್ನು ಅರಿತುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ ಅವರು ತಿಳಿಸಿದರು.
ಮೀಸಲಾತಿ ಸಮುದಾಯದ ಕೂಗು:
ಕೋಳಿ ಬೆಸ್ತ, ಗಂಗಾಮಾತಾ, ಅಂಬಿಗ, ಕಬ್ಬಲಿಗ ಹೀಗೆ ಒಟ್ಟು 39 ಹೆಸರುಗಳಿಂದ ಸಮುದಾಯ ಗುರುತಿಸಿಕೊಂಡಿದೆ. ಎಸ್. ಟಿ ಮೀಸಲಾತಿ ಸೇರ್ಪಡೆಗೆ
ಕೇಂದ್ರ ಸರ್ಕಾರ ಸಮುದಾಯದ ಇತಿಹಾಸ, ಪಂಗಡಗಳ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಅಂಬಿಗ, ಬೆಸ್ತ ಸಮುದಾಯವನ್ನು ಶೂದ್ರ ಎಂದು ಕರೆಯುತ್ತಿದ್ದರು.
ಮೀನು ಹಿಡಿಯುವ ಕಾಯಕ ಮಾಡುತ್ತಾ ಬಂದಿರುವುದರಿಂದ ಅತಿ ಕೆಳ ವರ್ಗದಿಂದ ಸಮಾಜ ಬಂದಿದೆ. ಶಿಕ್ಷಣ, ಆರ್ಥಿಕವಾಗಿ ಹಿಂದೆ ಉಳಿದಿದೆ ಅದಕ್ಕೆ ಕೋಳಿ ಬೆಸ್ತ ಸಮಾಜಕ್ಕೆ ಎಸ್. ಟಿ ಮೀಸಲಾತಿ ನೀಡಬೇಕು ಎಂದು ರವಿಕುಮಾರ ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಅವರು ಮಾತನಾಡಿ ಸುಮಾರು 1956 ರಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಯಲ್ಲಿ ಕೋಳಿ ಬೆಸ್ತ ಸಮುದಾಯದ ಹೆಸರು ಇತ್ತು. ಆದರೆ ಅಂದಿನ ದಿನಗಳಲ್ಲಿ ಸಮಾಜ ಶೈಕ್ಷಣಿಕವಾಗಿ ಹಿಂದುಳಿದ ಕಾರಣ ಯಾವುದೇ ಹೋರಾಟ ಮನವಿಗಳನ್ನು ಮಾಡಿಲ್ಲ. ಈಗಲಾದರೂ ಕೋಳಿ ಬೆಸ್ತ ಸಮಾಜ ಎಸ್.ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದು ವಿನಂತಿಸಿದರು.
ಈ ವೇಳೆ ಉಪನ್ಯಾಸ ನೀಡಿದ ಸಿಂಧನೂರು ಡಾ. ಮಲ್ಲಿಕಾರ್ಜುನ ಕಮತಗಿ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ ಮೂಲಕ ಸುಮಾರು 12 ಶತಮಾನದ ಬಸವಣ್ಣನವರ ಕಾಲದಲ್ಲಿ ತಮ್ಮ ಚಿಂತನೆಗಳನ್ನು ಸಾರಿದ್ದಾರೆ. ಕಾಯಕ ಕೇವಲ ಹೊಟ್ಟೆ ಗೇಣು ಬಟ್ಟೆಗಾಗಿ ಮಾಡಿಲ್ಲ ಕಾಯಕದ ಜೊತೆಗೆ ಸಮಾಜದಲ್ಲಿನ ಮೂಡನಂಬಿಕೆ, ಮೌಡ್ಯಗಳನ್ನು ಕಿತ್ತೊಗೆಯುವ ಕಾಯಕ ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಸವಣ್ಣವರ ಪ್ರೇರೇಪಣೆಯಿಂದ ತಮ್ಮ ಚಿಂತನೆಗಳ ಮೂಲಕ ವಚನ ಸಾಹಿತ್ಯದ ಕೊಡುಗೆ ಸಮಾಜಕ್ಕೆ ನೀಡಿದ್ದಾರೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಅವರ ವಚನ ಸಾಹಿತ್ಯ ಸಾಕಷ್ಟು ಪರಿಣಾಮ ಬೀರಿತ್ತು ಅದಕ್ಕಾಗಿ ಅಂದಿನ ಕಾಲದಲ್ಲಿ ನಿಜ ಶರಣ ಎಂಬ ಬಿರುದು ಅಂಬಿಗರ ಚೌಡಯ್ಯನವರಿಗೆ ನೀಡಲಾಗಿದೆ ಎಂದು ಕಮತಗಿ ಅವರು ಉಪನ್ಯಾಸ ನೀಡಿದರು.
ಪುಸ್ತಕ ಬಿಡುಗಡೆ:
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು
ನಿಜ ಶರಣ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ, ಅವರ ವಿಚಾರ ಧಾರೆ, ವಚನ ಸಾಹಿತ್ಯದ ಪುಸ್ತಕವನ್ನು ಬಿಡುಗಡೆಗೊಳಿಸಿದರು .
ನಿಜ ಶರಣ ಅಂಬಿಗರ ಚೌಡಯ್ಯನವರ ನರಸೀಪುರ ಪೀಠದ ಸ್ವಾಮೀಜಿ, ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಕಿತ್ತೂರು ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸರ್ವೋತ್ತಮ ಜಾರಕಿಹೊಳಿ, ಸಮಾಜದ ಮುಖಂಡರು, ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೆರವಣಿಗೆ ಕಾರ್ಯಕ್ರಮ:
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ನಗರದ ಕೋಟೆ ಕೆರೆಯಿಂದ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚನ್ನಮ್ಮ ವೃತ್ತದ ಮಾರ್ಗವಾಗಿ ಸರ್ದಾರ ಮೈದಾನ ತಲುಪಿತು.
ಮೆರವಣಿಗೆ ಕಾರ್ಯಕ್ರಮದಲ್ಲಿ ಕುಂಭ ಮೇಳ, ಡೊಳ್ಳು ಕುಣಿತ, ಚಂಡೆ ವಾದ್ಯ, ಗಾರಡಿ ಗೊಂಬೆ, ಕಹಳೆ, ನಗಾರಿ ತಂಡ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಆನೆ ಅಂಬಾರಿ, ಒಂಟೆ, ಕುದುರೆ ನೋಡುಗರ ಕಣ್ಣಿಗೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಅಧ್ಯಕ್ಷ ದಿಲೀಪ ಕುರಂದವಾಡೆ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮತ್ತಿತರ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.