23/12/2024
IMG-20240127-WA0072

ಬೆಳಗಾವಿ-27:ಓರ್ವ ಮಹಿಳೆಗೆ ಧಾರ್ಮಿಕ ಸಂಸ್ಕಾರ ಬಂದರೆ ಇಡೀ ಮನೆತನಕ್ಕೆ ಸಂಸ್ಕಾರ ಬಂದಂತೆ ಹೀಗಾಗಿ ಮಹಿಳೆಯರು ಸಂಸ್ಕಾರವಂತರಾಗುವುದು ಅತೀ ಅನಿವಾರ್ಯವಾಗಿದೆ.ಸಮಾಜದಲ್ಲಿ ತುಳಿತ್ತಕೊಳ್ಳದಾದವರಿಗೆ ಸಮಾನತೆ ತಂದುಕೊಟ್ಟ ವಚನ ಸಾಹಿತ್ಯವನ್ನು ಮಹಿಳೆಯರು ಅಧ್ಯಯನ ಮಾಡಬೇಕು. ಇದು ಅವರಲ್ಲಿ ನೈತಿಕ ಹಾಗೂ ಆತ್ಮಸ್ಥೈರ್ಯವನ್ನು ತಂದು ಕೊಡುತ್ತದೆ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಗಂಗಾ ಮಾತಾಜಿ ಅಭಿಪ್ರಾಯಪಟ್ಟರು.ಅವರು ಶನಿವಾರ ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಸರ್ವಾಧಕ್ಷತೆ ವಹಿಸಿ ಮಾತನಾಡಿದರು.

IMG 20240127 WA0062 -

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ ಜಾತಿ, ಮತ, ಪಂಥ, ಲಿಂಗಭೇದ, ವರ್ಗಭೇದ, ವರ್ಣಭೇದವೆನ್ನದೆ ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಜಾರಿಗೆ ತಂದವರು ಬಸವಣ್ಣನವರು. ಅವರ ಅನುಯಾಯಿಗಳು ಮೂಢನಂಬಿಕೆಯಿಂದ ಕೂಡಿರುವ ವೈದಿಕ ಆಚರಣೆಗೆ ಜೋತು ಬೀಳದೆ ಲಿಂಗಾಯತ ನಿಜಾಚರಣೆಯನ್ನು ಅಳವಡಿಸಿಕೊಂಡು ಸಾಮಾಜಿಕವಾಗಿ, ಧಾರ್ಮಿಕವಾಗಿ ಬೆಳಕಿಗೆ ಬರಬೇಕು ಎಂದರು.

ಸಮಾರಂಭದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಆಡಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಓರ್ವ ಮಹಿಳೆ ಸಂಘಟಿತವಾದರೆ ಕೇವಲ ತಾಲೂಕು, ಜಿಲ್ಲೆ, ರಾಜ್ಯ ಮಾತ್ರವಲ್ಲ ಇಡೀ ಭಾರತವೇ ಸಂಘಟಿತವಾದಂತೆ ಎಂದರು.
ನೇತೃತ್ವದ ನುಡಿಗಳನ್ನಾಡಿದ ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ ಭೂಮಿಯ ಮೇಲಿನ ಸಕಲ ಜೀವರಾಷಿಗಳಿಗೆ ಲೇಸನ್ನೆ ಬಯಸಿದ, ಮಹಾಮಾನವತಾವಾದಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಸರ್ಕಾರ ಘೋಷಿಸಿರುವುದು ಅಭಿನಂದನೀಯ ಎಂದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ್ ಇತ್ತೀಚಿಗೆ ಕೆಲವು ಮಠಾಧೀಶರು ಮೀಸಲಾತಿ ಹೆಸರಿನಲ್ಲಿ ಸಮಾಜವನ್ನು ಉಪಜಾತಿಗಳಾಗಿ ವಿಂಗಡಿಸಿ ಸಮಾಜ ಒಡೆಯುತ್ತಿರುವುದು ದುರಂತದ ಸಂಗತಿ ಎಂದರು. ಸಮಾರಂಭದಲ್ಲಿ ಆಶಯ ನುಡಿ ವ್ಯಕ್ತಪಡಿಸಿದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ತಾಯಿಯವರು ಹೆಣ್ಣಿಗೆ ಸರ್ವ ಸಮಾನವಾದ ಸಮಾನತೆಯ ಸ್ಥಾನಮಾನ ನೀಡಿದ್ದು ಲಿಂಗಾಯತ ಧರ್ಮ. ಹೆಣ್ಣು ಮಕ್ಕಳು ಮೂಢನಂಬಿಕೆಗೆ ಜೋತು ಬೀಳದೆ ವೈಜ್ಞಾನಿಕವಾಗಿ ಆಲೋಚಿಸಿ ಬಸವ ಆಶಯದಂತೆ ಬದುಕಬೇಕು ಎಂದರು.

ಸಮಾರಂಭಕ್ಕೂ ಮುಂಚೆ ಶ್ರೀನಗರದ ಗಾರ್ಡನ್ ದಿಂದ ಪ್ರಾರಂಭವಾಗಿ ಶಿವಬಸವ ನಗರದ ಲಿಂಗಾಯತ ಭವನ, ಕೆಇಬಿ ಮಾರ್ಗದ ಮೂಲಕ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ವರೆಗೆ ಸರ್ವಾಧ್ಯಕ್ಷರ ವೈಭವದ ಮೆರವಣಿಗೆ ಜರುಗಿತು. ಮೆರವಣಿಗೆಗೆ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಚಾಲನೆ ನೀಡಿದರು. ಶರಣೆ ಪ್ರೇಮಕ್ಕ ಅಂಗಡಿ, ಗೌರಿ ಕರ್ಕಿ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಪ್ರಭಾ ಪಾಟೀಲ ಅವರು ವಂದನಾರ್ಪಣೆ ನಡೆಸಿಕೊಟ್ಟರು.

error: Content is protected !!