ಮೂಡಲಗಿ-18: ಬಾಲ್ಯವಿವಾಹ ತಡೆಗೆ ಗ್ರಾಪಂಗಳು ಅಗತ್ಯ ಕ್ರಮಕೈಗೊಳ್ಳಬೇಕು. ಈ ಕುರಿತು ಗ್ರಾಪಂ ಆಡಳಿತ ಮಂಡಳಿ ಜನರಲ್ಲಿಯೂ ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದರು. ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ಗ್ರಾಮೀಣ ಭಾಗದ ಮಕ್ಕಳು ಉನ್ನತ ಹುದ್ದೆಗೇರುವ ನಿಟ್ಟಿನಲ್ಲಿ ಗ್ರಾಪಂಗಳು ಗಮನ ಹರಿಸಬೇಕು. ಸರಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಸೂಚನೆ ನೀಡಿದರು.
ಬಳಿಕ ಗ್ರಂಥಾಲಯ, ಹಳ್ಳಿ ಸಂತೆ ಹಾಗೂ ಸರ್ಕಾರಿ ಶಾಲೆ ಹಾಗೂ ಪ್ರವಾಹ ಪೀಡಿತ ಪ್ರದೇಶ ಪರಿಶೀಲಿಸಿ, ಬಳಿಕ ವಡೇರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ವಸತಿ ನಿಲಯ ಹಾಗೂ ಅಂಗನವಾಡಿಗೆ ಭೇಟಿ ನೀಡಿದ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಎಫ್.ಜಿ.ಚಿನ್ನನವರ, ಎಇಇ ಉದಯಕುಮಾರ ಕಾಂಬಳೆ, ಬಿಇಓ ಅಜೀತ ಮನ್ನಿಕೇರಿ, ಸಿಡಿಪಿಓ ಯಲ್ಲಪ್ಪಾ ಗದಾಡಿ, ತಾಪಂ ಸಹಾಯಕ ನಿರ್ದೇಶಕರಾದ ಸಂಗಮೇಶ ರೊಡ್ಡನ್ನವರ, ಚಂದ್ರಶೇಖರ ಬಾರ್ಕಿ, ಪಿಡಿಓ ಶಿವಾನಂದ ಗುಡಸೆ, ತಾಂತ್ರಿಕ ಸಂಯೋಜಕ ನಾರ್ಗಾಜುನ ಇಳಿಗೇರ, ಎಂಐಎಸ್ ಸಂಯೋಜಕ ನಿರಂಜನ ಮಲ್ಲವ್ವಗೋಳ, ತಾಂತ್ರಿಕ ಸಹಾಯಕ ಮಹಮ್ಮದ ನಯಾಗರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
