ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ
ಬೆಳಗಾವಿ-05 : ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಗುರುವಾರ ಖಾನಾಪೂರ ತಾಲೂಕಿನ ವಿವಿಧ ಇಲಾಖೆಗಳ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ, ಸಿಬ್ಬಂದಿಗಳ ಹಾಜರಾತಿ ಹಾಗೂ ಇಲಾಖೆಗಳ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ತಾಲೂಕ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲಿಸಿ, ಕಾರ್ಯಾಲಯದ ಆವರಣದಲ್ಲಿರುವ ಸಭಾಂಗಣ, ಸಾಮರ್ಥ್ಯಸೌಧ ಹಾಗೂ ಇನ್ನಿತರ ವಿಭಾಗಗಳನ್ನು ವೀಕ್ಷಿಸಿದರು.
*ತಾಲೂಕಾ ಆಸ್ಪತ್ರೆಗೆ ಭೇಟಿ*:
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲನೆ ಮಾಡಿ, ಸಾರ್ವಜನಿಕರಿಗೆ ಎಲ್ಲ ಅಗತ್ಯ ಸಿಬ್ಬಂದಿಗಳು ಲಭ್ಯವಿರಬೇಕು, ಸಮಯ ಪಾಲನೆ ಮಾಡಬೇಕು ಹಾಗೂ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಆಸ್ಪತ್ರೆಯ ಆವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಎನ್. ಆರ್. ಎಲ್. ಎಮ್. ಯೋಜನೆಯಡಿ ಕ್ಯಾಂಟೀನ್ ಆರಂಭಿಸುವಂತೆ ಖಾನಾಪೂರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದರು.
*ಶಾಸಕರ ಮಾದರಿ ಶಾಲೆಗೆ ಭೇಟಿ*:
ತದ ನಂತರ ಶಾಸಕರ ಮಾದರಿ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಶಾಲೆಯಲ್ಲಿ ನಿರ್ಮಿಸಲಾಗುತ್ತಿರುವ ಶೌಚಾಲಯ ಕಾಮಗಾರಿಯನ್ನು ವೀಕ್ಷಿಸಿದರು. ಮಕ್ಕಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಹಾಗೂ ಎಲ್ಲ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಅದರಜೊತೆಗೆ ಪಟ್ಟಣದ ಶಿವಸ್ಮಾರಕ ವೃತ್ತದಲ್ಲಿರುವ ತಾಲೂಕ ಪಂಚಾಯತಿಗೆ ಸಂಬಂಧಿಸಿದ ಮಾರಾಟ ಮಳಿಗೆಗಳನ್ನು ಕೂಡ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಖಾನಾಪೂರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪಂಚಾಯತ ರಾಜ್) ರಾಜೇಂದ್ರ ಜಾಧವ, ಪಂಚಾಯತರಾಜ್ ಸಹಾಯಕ ನಿರ್ದೇಶಕ ವಿಜಯಕುಮಾರ ಕೋತಿನ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿರಿದ್ದರು.
