ಎಚ್.ಎಸ್.ವಿ. ಕವಿಯಷ್ಟೇ ಅಲ್ಲ ಶ್ರೇಷ್ಠ ನಾಟಕಕಾರರೂ ಹೌದು: ಡಾ. ಅರವಿಂದ
****”
ಬೆಳಗಾವಿ-05:ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಹಾಸ್ಯಕೂಟ ಸಂಘಟನೆಗಳ ಆಶ್ರಯದಲ್ಲಿ ನಮ್ಮನ್ನು ಅಗಲಿದ ನಾಡಿನ ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಶ್ರದ್ಧಾಂಜಲಿ ಸಭೆಯನ್ನು ಕರೆಯಲಾಗಿತ್ತು.
ಈ ಸಭೆಯಲ್ಲಿ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡಿ, ವೆಂಕಟೇಶಮೂರ್ತಿಯವರು ಕವಿಗಳೆಂದು ಅತ್ಯಂತ ಚಿರಪರಿಚಿತರು ನಾನೊಬ್ಬ ರಂಗಕರ್ಮಿಯಾಗಿ ಹೇಳುವುದೆಂದರೆ ಅವರೊಬ್ಬ ಶ್ರೇಷ್ಠ ನಾಟಕಕಾರರೂ ಹೌದು, ನನ್ನನ್ನು ಹೆಚ್ಚಾಗಿ ಸೆಳೆದದ್ದು ಅವರು ಬರೆದಿರುವ ನಾಟಕಗಳು. ಅವರ ನಾಟಕವನ್ನು ರಂಗಕ್ಕೆ ತರುವ ಕನಸು ನನ್ನದಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಡಾ. ಸರಜು ಕಾಟ್ಕರ್ ಮಾತನಾಡುತ್ತ ವೆಂಕಟೇಶಮೂರ್ತಿವರು ನಾಟಕ, ಕಾವ್ಯ, ಕಾದಂಬರಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದವರು. ಆಧ್ಯಾತ್ಮವನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡುತ್ತಿದ್ದವರು. ನನಗೆ ತುಂಬ ಆತ್ಮೀಯರಾಗಿದ್ದರು ಎಂದು ಹೇಳಿದರು.
ಹಿರಿಯ ಪತ್ರಕರ್ತ, ಲೇಖಕ ಎಲ್. ಎಸ್. ಶಾಸ್ತ್ರಿಯವರು ಮಾತನಾಡಿ ವೆಂಕಟೇಶಮೂರ್ತಿಯವರ ಹಲವಾರು ಕವಿತೆಗಳನ್ನು ನಾನು ಹಾಡಿ ಸಂಭ್ರಸಿದವ. ಅವರು ಹಾಡಲು ಬರುವಂತಹ ಗೇಯ ಗೀತೆಗಳನ್ನು ಕೊಟ್ಟವರು ಎಂದು ಹೇಳಿದರು.
ಲೇಖಕ ಗುಂಡೇನಟ್ಟಿ ಮಧುಕರ ಅವರು ಮಾತನಾಡುತ್ತ ವೆಂಕಟೇಶಮೂರ್ತಿಯವರ ಒಡನಾಟ ತುಂಬ ಖುಷಿ ಕೊಡುವಂತಹದ್ದು. ಕಿರಿಯರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಪ್ರತಿವರ್ಷ ಕರುನಾಡದೀಪ ಎಂಬ ದೀಪಾವಳಿ ವಿಶೇಷಾಂಕವನ್ನು ನಾನು ಹೊರತರುತ್ತಿದ್ದೆ. ಒಂದು ವರ್ಷ ವೆಂಕಟೇಶಮೂರ್ತಿಯವರ ಮುಖಪುಟ, ಸಾಹತ್ಯದೊಂದಿಗೆ ಹೊರತಂದಿದ್ದೆ ಅದನ್ನು ನೋಡಿ ಅವರಾಡಿದ ಪ್ರೋತ್ಸಾಹದ ಮಾತು ನನಗೆ ಹೊಸಶಕ್ತಿಯನ್ನು ನೀಡಿದ್ದವು ಎಂದು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.
ಆರ್. ಬಿ. ಕಟ್ಟಿ, ಮಮತಾ ಶಂಕರ, ದೀಪಿಕಾ ಚಾಟೆ, ಆನಂದ ಪುರಾಣಿಕ, ಡಾ. ಎಚ್ ಐ. ತಿಮ್ಮಾಪುರ, ಶಾಲಿನಿ ಚಿನಿವಾರ, ಚಂದ್ರಶೇಖರ ನವಲಗುಂದ,ಜಯಶ್ರೀ ಎಂ. ಎ. ಡಾ. ಸಿದ್ಧಾಪುರ ಎಚ್ಚೆಸ್ವಿಯವರ ಕುರಿತಾದ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಶ್ರೀಮತಿ ರಾಜೇಶ್ವರಿ ಹಿರೇಮಠ ವೆಂಕಟೇಶಮೂರ್ತಿಯವರ ರಚನೆಯನ್ನು ಹಾಡಿದರು. ಒಂದು ನಿಮಿಷ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
