
ರಾಮದುರ್ಗ-06: ರಾಷ್ಟ್ರೀಯ ಸೇವಾ ಯೋಜನೆಯು ಯುವ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ತುಂಬುವ ಸಂಘಟನೆಯಾಗಿದ್ದು, ಯುವಕರಲ್ಲಿ ನಿಷ್ಕಾಮ್ಯ ಸೇವೆ ಮಾಡುವ, ವ್ಯಕ್ತಿತ್ವ ವಿಕಸನಗೊಳಿಸಿ, ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತದೆಂದು ಸಾಹಿತಿ ಡಾ ರಾಜು ಕಂಬಾರ ಹೇಳಿದರು.
ರಾಮದುರ್ಗ ಪಟ್ಟಣದ ಐ ಎಸ್ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕಗಳ ಆಶ್ರಯದಲ್ಲಿ ದತ್ತು ಗ್ರಾಮ ನರಸಾಪುರದಲ್ಲಿ ಶನಿವಾರ ಜರುಗಿದ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ನಲ್ಲಿ ಯುವಕರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಕಂಬಾರರು, ಎನ್ಎಸ್ಎಸ್ ಶಿಬಿರಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿಯೇ ಏರ್ಪಡಿಸಲಾಗುತ್ತಿದ್ದು, ಗ್ರಾಮೀಣರ ರೀತಿ- ನೀತಿ-ಪ್ರೀತಿ-ವಿಶ್ವಾಸ ಸಂಪ್ರದಾಯ, ದುಡಿಮೆ ಕಲೆಗಳು ಒಂದಿಲ್ಲ ಒಂದು ರೀತಿಯಲ್ಲಿ ಎನ್ಎಸ್ಎಸ್ ಮೇಲೆ ಪ್ರಭಾವ ಬೀರಿವೆ. ಜನಪದರ ಜೀವನ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಎನ್ಎಸ್ಎಸ್ ನಲ್ಲಿ ಒಬ್ಬ ಒಳ್ಳೆಯ ಸ್ವಯಂಸೇವಕ ನಿರ್ಮಾಣವಾಗಬಲ್ಲನು ಎಂದು ಮುಂದುವರೆದ ಅವರು, ಜನಪದ ಕಲೆ ಸಾಹಿತ್ಯ ಸಂಸ್ಕೃತಿ ಮುಂತಾದವುಗಳ ಜನಪದರ ಜೀವನ ವಿಧಾನಗಳ ಅರಿವನ್ನು ಯುವಕರು ಮೂಡಿಸಿ ಕೊಂಡರೆ ಭಾರತ ದೇಶವನ್ನು ಸದೃಢಗೊಳಿಸಲು ಸಾಧ್ಯವಿದೆ. ಜನಪದರ ಕಲೆ ಸಾಹಿತ್ಯ ಸಣ್ಣಾಟ, ದೊಡ್ಡಾಟ ಶ್ರೀಕೃಷ್ಣ ಪಾರಿಜಾತ ಬಯಲಾಟಗಳಲ್ಲಿ ಶ್ರಮ ಮತ್ತು ಪ್ರತಿಭೆಗಳು ಅಡಕವಾಗಿದ್ದು, ಯುವಕರು ಈ ನಿಟ್ಟಿನಲ್ಲಿ ಗ್ರಾಮೀಣರ ಪ್ರತಿಫಲವಿಲ್ಲದ ಸೇವೆ, ಆರೋಗ್ಯವಂತಿಕೆಯನ್ನು ನೀಡುವ ಕಲೆಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಸದೃಢ ಭಾರತದ ಯುವ ನಾಯಕರಾಗಿ ಬೆಳೆಯಬೇಕೆಂದ ಕಂಬಾರರು ಬಯಲಾಟದ ಪದಗಳನ್ನು ಹಾಡಿ ಶಿಬಿರಾರ್ಥಿ ಗಳನ್ನು ರಂಜಿಸಿದರು.
ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ವಿನಾಯಕ ಹೊಸಮನಿ ವಹಿಸಿ ಮಾತನಾಡಿ, ಗ್ರಾಮೀಣ ಬದುಕಿನ ಜೀವನದಲ್ಲಿ ಸ್ವಯಂ ಸೇವೆ ಸಲ್ಲಿಸುವ ಗುಣವಿದೆ. ಒಗ್ಗಟಿನ ಬಲವಿದೆ. ಸಂಘಟನಾತ್ಮಕ ಚಾತುರ್ಯತೆಗಳಿವೆ ಈ ಎಲ್ಲಾ ಗುಣಗಳನ್ನು ಶಿಬಿರಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಶಿಬಿರಾಧಿಕಾರಿ ಪ್ರೊ.ಅಶೋಕ ಹುಲ್ಲೋಳಿ ಮಾತನಾಡಿ, ಯುವಕರು ದೇಶದ ಶಕ್ತಿ, ಶ್ರಮದಾನದ ಮೂಲಕ ಯುವಕರು ದೇಶದ ಭವಿಷ್ಯವನ್ನೇ ಬದಲಿಸುವ ಶಕ್ತಿವಂತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳನ್ನು ಸುಧಾರಿಸುವ ಮೂಲಕ ದೇಶದ ಭವಿಷ್ಯದ ಸಂಪತ್ತು ಯುವಕರಾಗಬೇಕೆಂದು ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ನರಸಾಪೂರ ಗ್ರಾಮದ ಯುವ ಧುರೀಣರಾದ ಬಸವರಾಜ ಇಂಚಲ, ದುಂಡಪ್ಪ ಇಂಚಲ, ಮಹಮ್ಮದ ನದಾಫ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಶಿಬಿರಾಧಿಕಾರಿ ಪ್ರೊ. ಸಿದ್ಧಾರೂಢ, ಮಾರುತಿ ಸೂಳಿಕೇರಿ, ವಿಜಯ ಶೆಟ್ಟಿ, ಮಾಲಾ ಹಾಲೊಳ್ಳಿ ಮುಂತಾದವರಿದ್ದರು.
ಶಿಬಿರಾರ್ಥಿಗಳಾದ ಸುಧಾ ಬಂಗಿ ಸ್ವಾಗತಿಸಿದರು. ನಾಗವ್ವ ಮಾದರ ನಿರೂಪಿಸಿದರು.
ಸಿದ್ದನಗೌಡ ಪಾಟೀಲ ಅತಿಥಿ ಪರಿಚಯಿಸಿದರು.
ಅರುಣ ಬಾಗಪಗೊಳ ವಂದಿಸಿದರು.