ಬೆಳಗಾವಿ-18: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾತ್ರ ವಿಶ್ವ ಗುರು ಎಂದು ಕರೆಸಿಕೊಳ್ಳಲು ಅರ್ಹತೆ ಇದೆ. ಆದರೆ ನೀವು ಸಿಕ್ಕ, ಸಿಕ್ಕವರನ್ನು ವಿಶ್ವ ಗುರು ಅಂತಾ ಬಿಂಬಿಸಬೇಡಿ ಮತ್ತು ಕರೆಯಲು ಹೋಗಬೇಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ನಗರದ ಕುಮಾರ ಗಂಧರ್ವ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ “ಸಂವಿಧಾನ ಸಮರ್ಪಣಾ ದಿನ”ದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶದಲ್ಲಿ ಹೋಗಿ ನಾನು ಬುದ್ದನ ನಾಡಿನಿಂದ ಬಂದಿದ್ದೇನೆ ಎಂದು ಹೇಳುವ ಪ್ರಧಾನಿ ಮೋದಿ ಅವರು ದೇಶಕ್ಕೆ ಕಾಲಿಟ್ಟ ಕೂಡಲೆ ರಾಮ ಜಪ ಮಾಡುತ್ತಾರೆ. ಏಕೆಂದರೆ ವಿದೇಶದಲ್ಲಿ ಹೋಗಿ ರಾಮನ ನಾಡಿನಿಂದ ಬಂದಿದ್ದೇನೆಂದು ಹೇಳಿದರೆ ಅವರಿಗೆ ಗೌರವ ಸಿಗಲ್ಲ. ಜನಕ್ಕೆ ಸುಳ್ಳು ಹೇಳಿ ಮೋಸ ಮಾಡುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕೆಂದು ತಿಳಿಸಿದರು.
ಸಂವಿಧಾನ ವಿರೋಧಿ ಶಕ್ತಿಗಳನ್ನು ನಿಯಂತ್ರಿಸಲು ದಲಿತ, ದಮನಿತ, ಶೋಷಿತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ರಾಜ್ಯಾದ್ಯಂತ ಈಗಾಗಲೇ 23 ಜಿಲ್ಲೆಗಳಲ್ಲಿ ಸಮಾವೇಶ ಆಯೋಜಿಸಿಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟ, ಬರಹ ಮತ್ತು ಬದುಕುಗಳನ್ನು ಓದಬೇಕು. ಜೋತಿಭಾ ಫುಲೆ, ಶಾಹು ಮಹಾರಾಜರ ಸೇರಿದಂತೆ ನಮ್ಮ ಏಳ್ಗೆಗೆ ಶ್ರಮಿಸಿದವರ ಬಗ್ಗೆ ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.
ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರ ಸ್ವೀಕರಿಸಿ ಕೂಡಲೇ ಬಿಡುಗಡೆಗೊಳಿಸಬೇಕು. ಜನಗಣತಿ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಕಡ್ಡಾಯವಾಗಿ ರಾಜಕೀಯ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿ ಇದೇ ಜ. 28ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಕೆ. ಮಂತ್ರೇಸಿ ಉಪನ್ಯಾಸ ನೀಡಿ, ದೇಶದ 600 ಸಂಸ್ಥಾನಿಕರ ಪೈಕಿ ಕೇವಲ ಶಾಹೂ ಮಹಾರಾಜರು ಒಬ್ಬರು ಶೋಷಿತ ವರ್ಗದಿಂದ ಬಂದಿದ್ದ ಅಂಬೇಡ್ಕರ್ ಅವರನ್ನು ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ಕಳುಹಿಸಿಕೊಟ್ಟಿದ್ದರು. ಶಾಹೂ ಮಹಾರಾಜರು ಇದ್ದಿದ್ದುದರಿಂದಲೇ ಅಂಬೇಡ್ಕರ್ ಪ್ರತಿಭೆ ಹೊರಗೆ ಬಂತು ಎಂದರು.
ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರತಿಮೆಯ ಕೆಳಗಿನ ನಾಮಫಲಕದಲ್ಲಿ ‘ಡಾ. ಬಿ.ಆರ್. ಅಂಬೇಡ್ಕರ್ ಜಗತ್ತಿನ ಅತ್ಯುತ್ತಮ ವಿದ್ಯಾರ್ಥಿ’ ಎಂದು ಬರೆಯಲಾಗಿದೆ. ಲಂಡನ್‌ನ ಸಾರ್ವಜನಿಕ ಗ್ರಂಥಾಲಯದಲ್ಲಿ ಅತಿ ಹೆಚ್ಚಿನ ಸಮಯ ಕಾಲ ಕಳೆದ ಓದುಗರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಂಬೇಡ್ಕರ್ ಹೆಸರಿದೆ. ಇತಿಹಾಸವನ್ನು ಸಮರ್ಪಕವಾಗಿ ಬಿಂಬಿಸುವ ಕೆಲಸ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನ ಬರೆದು 75 ವರ್ಷ ಪೂರ್ವವಾಗುತ್ತಿದ್ದು, ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ, ಈ ಕಾರ್ಯಕ್ರಮ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಆಗಬೇಕು. ಸಂವಿಧಾನದಲ್ಲಿ ಅನೇಕ ತಿದ್ದುಪಡಿಗಳು ಆಗುತ್ತಿದ್ದು, ಇದನ್ನು ತಪ್ಪಿಸುವ ಕಾರ್ಯ ಮಾಡಬೇಕಿದೆ. ಸತ್ಯವನ್ನು ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟಕ್ಕೆ ಬೆಲೆ ಸಿಗುತ್ತದೆ ಎಂದು ಪ್ರತಿಪಾದಿಸಿದರು.
ಶಾಸಕ ಆಸೀಫ್ (ರಾಜು) ಸೇಠ್ ಮಾತನಾಡಿ, ಸಮಾಜದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಪ್ಪು ಕಲ್ಪನೆ ಮೂಡಿದೆ. ಡಾ. ಬಾಬಾ ಸಾಹೇಬರು ದಲಿತರಿಗೆ ಅಷ್ಟೇ ಸಂವಿಧಾನ ರಚಿಸಿಲ್ಲ. ಅವರನ್ನು ದಲಿತ ಸಮಾಜಕ್ಕೆ ಸೀಮಿತಗೊಳಿಸುವುದು ತಪ್ಪು. ಸಂವಿಧಾನ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಬೇಕೆಂದು ತಿಳಿಸಿದರು.
ದಲಿತ ಮುಖಂಡ ಸಂತೋಷ ದೊಡ್ಡಮನಿ ಮಾತನಾಡಿ, ಸಂವಿಧಾನ ಜಾರಿ ಆಗುವಕ್ಕಿಂತ ಮುಂಚೆ ರಾಜನ ಹೊಟ್ಟೆಯಲ್ಲಿ ರಾಜನೇ ಜನಿಸುತ್ತಿದ್ದ, ರಾಣಿ ಹೊಟ್ಟೆಯಲ್ಲಿ ರಾಣಿಯೇ ಜನ್ಮ ನೀಡುತ್ತಿದ್ದಳು. ಆದರೆ ಮತಗಟ್ಟೆಯಲ್ಲಿ ರಾಜ, ರಾಣಿ ಜನ್ಮ ನೀಡುವ ಹಾಗೆ ಮಾಡಿದ ಜಗತ್ತಿನ ಏಕೈಕ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮುಂಚೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಮಹಾಂತೇಶ ತಳವಾರ ಸ್ವಾಗತ ಭಾಷಣ ಮಾಡಿದರು. ದಲಿತ ಹಿರಿಯ ಮುಖಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ಮುಖಂಡರಾದ
ಸಿದ್ದಪ್ಪ ಕಾಂಬಳೆ, ಮಲ್ಲೇಶ ಚೌಗಲೆ, ಸುರೇಶ ತಳವಾರ, ಆನಂದ ಸದರಿಮನೆ, ಮಹಾದೇವ ತಳವಾರ, ವಿಠ್ಠಲ ಮಾದರ, ಯಲ್ಲಪ್ಪಾ ಹುದಲಿ, ಶಂಕರ ದೊಡ್ಡಮನಿ, ಆರ್.ಚಿ. ಕಾಂಬಳೆ, ವಿಜಯ ತಳವಾರ, ಮಲಗೌಡ ಪಾಟೀಲ್ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳಗಾವಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತಿರಿದ್ದರು.