11/12/2025
IMG-20250223-WA0001

*ನನಗೆ ಯಾವುದೇ ಭಾಷೆ, ಧರ್ಮದ ರಾಜಕಾರಣದಲ್ಲಿ ವಿಶ್ವಾಸವಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಬೆಳಗಾವಿ-೨೩ : ಭೀಕರ ಅಪಘಾತ ನಡೆದರೂ ನಾನು ಬದುಕಿ ಬಂದಿದ್ದೇನೆ. ಇದಕ್ಕೆ ಕ್ಷೇತ್ರದ ಜನರ ಆಶಿರ್ವಾದವೇ ಕಾರಣ. ಅಪಘಾತದಿಂದ ಗಾಯಗೊಂಡು 40 ದಿನ ಹಾಸಿಗೆ ಹಿಡಿದಿದ್ದರೂ ಕ್ಷೇತ್ರದ ಕೆಲಸ ನಿಂತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಧರ್ಮವೀರ ಛತ್ರಪತಿ ಶ್ರೀ ಸಂಭಾಜಿ ಮಹಾರಾಜರ ಮೂರ್ತಿಯನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಧರ್ಮದಲ್ಲಿ ರಾಜಕಾರಣ ಇರಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಿಂದ ರಾಜಕಾರಣ ಮಾಡಬೇಕು. 40 ದಿನ ಹಾಸಿಗೆಯಲ್ಲಿದ್ದರೂ ಕ್ಷೇತ್ರದಲ್ಲಿ ಕೆಲಸ ನಿಂತಿಲ್ಲ. ನಿಮ್ಮೆಲ್ಲರ ಆಶಿರ್ವಾದ ಇದ್ದುದರಿಂದ ನಾನು ಬದುಕಿಬಂದಿದ್ದೇನೆ, ನನಗೆ ಪುನರ್ಜನ್ಮ ಸಿಕ್ಕಿದೆ. ಹಾಗಾಗಿ ನಿಮ್ಮೆಲ್ಲರನ್ನೂ ನೋಡಬೇಕೆನ್ನುವ ಕಾರಣದಿಂದ ಇಂದು ಬಂದಿದ್ದೇನೆ. ನನಗೆ ಯಾವುದೇ ಭಾಷೆ, ಧರ್ಮದ ರಾಜಕಾರಣದಲ್ಲಿ ವಿಶ್ವಾಸವಿಲ್ಲ. ಕೇವಲ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟವಳು ನಾನು ಎಂದು ಅವರು ಹೇಳಿದರು.
ಇಂತಹ ಪುಣ್ಯ ಪುರುಷರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕೆನ್ನುವ ಉದ್ದೇಶದಿಂದ ಸಂಭಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಾಗಾಗಿ ಮಹಾನ್ ಪುರುಷರ ಮೂರ್ತಿ ಪ್ರತಿಷ್ಠಾಪಿಸಲು ಯಾರಾದರೂ ಸಹಾಯ ಕೇಳಿದರೆ ಸಹಾಯ ಮಾಡಲು ನಮಗೆ ಹೆಮ್ಮೆ ಎನಿಸುತ್ತದೆ. ಈ ಭಾಗದ ವಿವಿಧ ಗ್ರಾಮಗಳಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಬಸವಣ್ಣನ ಮಂದಿರ, 2 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ನಿಲೇಶ್ ಚಂದಗಡ್ಕರ್, ಪ್ರವೀಣ ಮುರಾರಿ, ಮಂಜು, ಮಾರುತಿ ಸುಳಗೇಕರ್, ಚಂದ್ರು ಧರೆಣ್ಣವರ, ವಿಠ್ಠಲ ಕುರಬರ, ನಾಗೇಶ ದೇಸಾಯಿ, ಮಹೇಶ್, ಶಂಕರಗೌಡ ಪಾಟೀಲ, ಸತೀಶ ಡಿ, ಗಿರೀಶ್ ಬಾಬನ್ನವರ, ಬಸು ಕುಲಕರ್ಣಿ, ರಾಕೇಶ್ ಬುರುಡ, ಗಜಾನನ ಅನಗೋಳ್ಕರ್, ಪಿಂಟು‌ ಮಲ್ಲವ್ವಗೋಳ, ಪ್ರಭಾಕರ್ ಇತರರು ಹಾಜರಿದ್ದರು.

error: Content is protected !!