ಬೆಳಗಾವಿ-೨೩: ಬೆವರು ಸುರಿಸಿ ದುಡಿಯುವ ಜನಗಳ ಪರವಾಗಿ ಹುಟ್ಟಿಬಂದ ಪ್ರಗತಿಶೀಲ ಸಾಹಿತ್ಯ ಚಳುವಳಿಯಲ್ಲಿ ಬಸವರಾಜ ಕಟ್ಟೀಮನಿ ಅವರು ಬೀದಿಗೆ ಬಿದ್ದ ಮಹಿಳೆಯರ ಪರವಾಗಿ, ಜಾತೀಯತೆಯ ಅಪಮಾನಕ್ಕೆ ತುತ್ತಾದ ಅಸ್ಪೃಶ್ಯರ ಪರವಾಗಿ, ಬಂಡವಾಳಶಾಹಿ ಕ್ರೌರ್ಯಕ್ಕೆ ಬಲಿಯಾದ ಕಾರ್ಮಿಕರ ಪರವಾಗಿ ಬರೆದು ನಿಜವಾದ ಪ್ರಗತಿಶೀಲ ಲೇಖಕರೆನಿಸಿಕೊಂಡರು. ಧರ್ಮ ಮತ್ತು ರಾಜಕಾರಣದ ಅಪವಿತ್ರ ಮೈತ್ರಿಯನ್ನು ತಮ್ಮ ಕಥೆ, ಕಾದಂಬರಿಗಳ ಮೂಲಕ ಪ್ರತಿರೋಧಿಸಿದ ಅವರು ದುಡಿವ ಜನಗಳ ಪರವಾದ ಪ್ರಜಾಪ್ರಭುತ್ವ ಮುನ್ನೆಲೆಗೆ ಬರಬೇಕೆಂದು ಸತತವಾಗಿ ಹೋರಾಡಿದರು ಎಂದು ಖ್ಯಾತ ಬಂಡಾಯ ಸಾಹಿತಿ ಹಾಗೂ ಹೊಸತು ಮಾಸಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.
ಅವರಿಂದು ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತಿನ ಸಹಯೋಗದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಬಸವರಾಜ ಕಟ್ಟೀಮನಿ ಅವರ ಪ್ರಗತಿಶೀಲ ನಿಲುವುಗಳು’ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬಸವರಾಜ ಕಟ್ಟೀಮನಿ ಅವರು ಪತ್ರಕರ್ತರಾಗಿ ವೃತ್ತಿ ಆರಂಭಿಸಿದರೆ, ಕಥೆಗಾರರಾಗಿ ಸಾಹಿತ್ಯ ಕೃಷಿ ಆರಂಭಿಸಿ ಕಾದಂಬರಿಕಾರರಾಗಿ ಪ್ರಸಿದ್ಧಿ ಪಡೆದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರ ಒಟ್ಟು ಸಾಹಿತ್ಯ ಮತ್ತು ವಿಚಾರಧಾರೆಗಳಲ್ಲಿ ಜನಸಾಮಾನ್ಯರು ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟ ಪ್ರಜ್ಞೆ; ಬಡತನವೇ ಭೂಮಿಯ ಮೇಲಿರಬಾರದೆಂಬ ವರ್ಗ ಹೋರಾಟದ ಪ್ರಜ್ಞೆ; ವರ್ಣವಸ್ಥೆಯನ್ನು ಧಿಕ್ಕರಿಸುವ ಜಾತಿ ವಿರೋಧಿಪ್ರಜ್ಞೆ; ಆರ್ಥಿಕ ದುರಾವಸ್ಥೆಯಿಂದ ಶೋಷಣೆಗೊಳಗಾದ ಮಹಿಳಾಪರವಾದ ಲಿಂಗಪ್ರಜ್ಞೆ ಮತ್ತು ಬದುಕಿನ ಕೀಳರಿಮೆಯಿಂದ ಪುಟಿದೇಳುವ ಗ್ರಾಮೀಣ ಪ್ರಜ್ಞೆ ಅವರಲ್ಲಿ ದಟ್ಟವಾಗಿ ಮೇಳೈಸಿತ್ತು. ಸಮಾಜದಲ್ಲಿನ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಲು ಎಲ್ಲರೂ ರಾಯಭಾರಿಗಳಾಗಿ ಎಚ್ಚರಗೊಳ್ಳಬೇಕೆಂದು ಕಟ್ಟೀಮನಿ ಬಯಸಿದ್ದರು ಎಂದರು.
ಬಸವರಾಜ ಕಟ್ಟೀಮನಿ ಅವರು ಸಮಾಜದಲ್ಲಿ ಸಮತಾವಾದವನ್ನು ಪ್ರತಿಷ್ಠಾಪಿಸಲು ರಚಿಸಿದ ತಮ್ಮ ಬರವಣಿಗೆಯಿಂದ ಅವರು ಆ ಕಾಲದಲ್ಲಿ ಕತ್ತಿ ಮೊನೆ ಎಂಬ ಹೆಸರಿನ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಪ್ರಕಟಣೆಯ ಎಲ್ಲಾ ಸಾಹಿತ್ಯವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಮ್ಮ ಆಶಯ ನುಡಿಗಳಲ್ಲಿ ಪ್ರಸ್ತಾಪಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ನೂತನ ಅವಧಿಯ ಕಾರ್ಯ ಚಟುವಟಿಕೆಗಳ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಂ ಜಿ ಹೆಗಡೆ ಇಂದು ಕನ್ನಡದ ಒಟ್ಟು ಸಾಂಸ್ಕೃತಿಕ ವಲಯದಲ್ಲಿ ಬರಹಗಾರರು ಚಿಂತಕರು ಮುಖ್ಯವಾಹಿನಿಯಿಂದ ದೂರ ತಳ್ಳಲ್ಪಟ್ಟು ಅಪ್ರಸ್ತುತರು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಜನಜೀವನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಬಸವರಾಜ ಕಟ್ಟೀಮನಿ ಅವರು ಬರವಣಿಗೆಯಿಂದಲೇ ಬದುಕುತ್ತೇನೆ, ಬರೆದು ಜನರನ್ನು ತಲುಪುತ್ತೇನೆ ಎಂದು ಅವರು ಸೃಷ್ಟಿಸಿದ ಕಲ್ಪನೆಗಳು ಇಂದಿಗೆ ಆದರ್ಶವಾಗಬೇಕಿದೆ ಎಂದು ಹೇಳಿದರು. ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷರಾದ ಡಾ ಎಸ್ ಐ ಬಿರಾದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ, ಡಾ. ಎಚ್ ಬಿ ಕೋಲ್ಕಾರ್, ಡಾ. ವಿಜಯಮಾಲ ನಾಗನೂರಿ, ಪ್ರೊ. ಬಿ ಬಿ ಬಿರಾದಾರ್, ಡಾ. ನಾಗರಾಜ ಮುರಗೋಡ, ಸಿದ್ರಾಮಪ್ಪ ತಾವರಖೇಡ ವೇದಿಕೆಯಲ್ಲಿದ್ದರು. ಪ್ರತಿಷ್ಠಾನದ ಸದಸ್ಯರಾದ ಪ್ರೊ. ಎಸ್ ಜಿ ಚಿಕ್ಕನರಗುಂದ, ಡಾ. ವಿಷ್ಣು ಶಿಂಧೆ, ವಿಠ್ಠಲ್ ದಳವಾಯಿ, ಕವಿ ಡಾ. ಸರಜೂ ಕಾಟ್ಕರ್, ಡಾ. ನಿರ್ಮಲಾ ಭಟ್ಟಲ, ಡಾ. ಸಾಹುಕಾರ್ ಕಾಂಬಳೆ, ಡಾ. ಆನಂದ ಜಕ್ಕನ್ನವರ ಮುಂತಾದವರು ಭಾಗವಹಿಸಿದ್ದರು. ಅಧ್ಯಾಪಕರ ಪರಿಷತ್ತಿನ ಕಾರ್ಯದರ್ಶಿ ಡಾ. ಸುರೇಶ್ ಹನಗಂಡಿ ಸ್ವಾಗತಿಸಿದರು, ಶೋಭಾ ಕೊಕಟನೂರ ವಂದಿಸಿದರು. ಪ್ರೊ. ಎಸ್ ಎಂ ಉಪ್ಪಾರ್ ಕಾರ್ಯಕ್ರಮ ನಿರೂಪಿಸಿದರು.
