ಸುಪ್ರೀಂಕೋರ್ಟಿನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಹರಣದ ರಾಜಕೀಯ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಶಾಸಕರ ಮನೆಯ ಮುಂದೆ ತಮಟೆ ಚಳುವಳಿಯ ನಡೆಸುವ ಮೂಲಕ ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಾತಿ ಪರವಾಗಿ ದನಿ ಎತ್ತಬೇಕೆಂದು ಹುಬ್ಬಳ್ಳಿಯ ಶಾಸಕರನ್ನು ಆಗ್ರಹಿಸಲಾಯಿತು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಸಾದ ಅಬ್ಬಯ್ಯ, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ ಅವರ ಮನೆಯ ಮುಂದೆ ತಂಡೋಪ ತಂಡವಾಗಿ ಸೇರಿದ ಒಳಮೀಸಲಾತಿ ಪರ ಹೊರಾಟಗಾರರು ತಮಟೆಗಳನ್ನು ಬಾರಿಸುತ್ತ, ಘೋಷಣೆಗಳನ್ನು ಕೂಗುತ್ತ ಒಳಮೀಸಲಾತಿ ಪರವಾಗಿ ಚುನಾಯಿತ ಶಾಸಕರು ಸದನದಲ್ಲಿ ದನಿ ಎತ್ತುವ ಮೂಲಕ ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಆಗ್ರಹಿಸಿದರು.
ಕಳೆದ ಆಗಸ್ಟ್ 1 ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ, 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ, ಆಯೋಗಕ್ಕೆ ಬೇಕಾದ ಕಛೇರಿ, ಸಿಬ್ಬಂದಿ, ಹಣಕಾಸಿನ ನೆರವು ಕೊಡದೆ ಕಾಲಾಹರಣ ನಡೆಸಲಾಗುತ್ತಿದೆ. ಹೊಸದಾಗಿ ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಅಥವಾ ಒಳಮೀಸಲಾತಿ ಹೋರಾಟದಲ್ಲಿದ್ದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ, ಸರಕಾರದ ಮುಂದೆ ಈಗಾಗಲೇ ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿಗಳು ಸಿದ್ಧ ಪಡಿಸಿದ ವರದಿ ಇದೆ. ಮಾಧುಸ್ವಾಮಿಯವರ ಸಮಿತಿ ಏಕೆ,ಏಡಿ(AK,AD) ಸಮಸ್ಯೆಗೆ ಪರಿಹಾರ ಒದಗಿಸಿದೆ, 2011ರ ಜನಗಣತಿಯ ಅಂಕಿ ಅಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಅತ್ಯಂತ ಸ್ಪಷ್ಟವಾಗುತ್ತದೆ.
ಅಂತೆಯೇ, ಒಳಮೀಸಲಾತಿ ಜಾರಿ ಆಗುವವರೆಗೆ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಸರ್ಕಾರ ನೀಡಿದ್ದ ಭರವಸೆ ಇಂದು ಹುಸಿಯಾಗಿದೆ, ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೇ ಇದೆ. ಇದನ್ನು ನಮ್ಮ ಒಕ್ಕೂಟದ ವತಿಯಿಂದ ಉಗ್ರವಾಗಿ ಖಂಡಿಸುತ್ತೇವೆ ಹೋರಾಟದ ನೇತೃತ್ವ ವಹಿಸಿದ್ದ ಮಾದಿಗ ದಂಡೋರ ರಾಜ್ಯ ವಕ್ತಾರರಾದ ಶ್ರೀ ಮಂಜುನಾಥ ಕೊಂಡಪಲ್ಲಿ ಅವರು ಹೇಳಿದ್ದಾರೆ.
ಸಾಮಾಜಿಕ ನ್ಯಾಯದ ಪರವಾದ ತಮಟೆ ಚಳುವಳಿಗೆ ಮಾನ್ಯ ಶಾಸಕರಾದ ಶ್ರೀ ಪ್ರಸಾದ ಅಬ್ಬಯ್ಯ ಅವರು ಮತ್ತು ಶ್ರೀ ಮಹೇಶ ಟೆಂಗಿನಕಾಯಿ ಅವರು ಸಕಾರತ್ಮಕವಾಗಿ ಸ್ಪಂದಿಸಿದ್ದು, ನಮ್ಮ ಒಳಮೀಸಲಾತಿ ಹೋರಾಟಕ್ಕೆ ನ್ಯಾಯ ಒದಗಿಸಲು ಸದಾ ಸಿದ್ಧ ಎಂದು ಭರವಸೆ ನೀಡಿದ್ದಾರೆ ಎಂದು ಸಹ ಅವರು ತಿಳಿಸಿದರು. ಶ್ರೀ ಸೂರ್ಯನಾರಾಯಣ ಕನಮಕ್ಕಲ, ನಾಗೇಶ ಕತ್ರಿಮಾಲ, ಶ್ರೀನಿವಾಸ ರಾಮಗಿರಿ, ಗೋವಿಂದ ಬೆಲ್ಡೋಣಿ, ಸತ್ಯನಾರಾಯಣ ಎಂ, ಗುರು ಬೆಂಗಳೂರು, ಪಿ ಪಿ ಮಲ್ಯಾಳ, ಯಲ್ಲಪ್ಪ ಹರಿಜನ, ಪರಶುರಾಮ ಮಾದರ, ಓಬಳೇಶ ಯರಗುಂಟಿ, ಕೊಂಡಯ್ಯ ಭಂಡಾರಿ, ರಂಗನಾಯಕ ತಪೇಲ, ನಾಗಾರ್ಜುನ ಕತ್ರಿಮಾಲ, ಪ್ರಕಾಶ ಕನಮಕ್ಕಲ, ರಮೇಶ ಗುತ್ತಿ, ವೆಂಕಟೇಶ ಅರಪನಾಳ, ಉಮೇಶ ಆತ್ಮಕೂರ, ಓಬಳೇಶ ಪೆನುಗೋಲ, ನಾಗರಾಜ ಮುಂತಾದವರು ಉಪಸ್ಥಿತರಿದ್ದರು.