ವಿಕಲಚೇತನರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ-೧೪: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಹಿತಕಾಯುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಎಂಆರ್‌ಡಬ್ಲ್ಯು (ವಿವಿಧ್ಯೋದ್ದೇಶ ಪುನರ್ವಸತಿ ಕಾರ್ಯಕರ್ತರು), ವಿಆರ್‌ಡಬ್ಲ್ಯು(ಗ್ರಾಮೀಣ ಪುನವರ್ಸತಿ ಕಾರ್ಯಕರ್ತರು) ಹಾಗೂ ಯುಆರ್‌ಡಬ್ಲ್ಯು(ನಗರ ಪುನರ್ವಸತಿ ಕಾರ್ಯಕರ್ತರ) ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಬೆಳಗಾವಿ ಸುವರ್ಣವಿಧಾನಸೌಧದ ಬಳಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವಕರ್ನಾಟಕ, ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಮಾತನಾಡಿದ ಸಚಿವರು, ನೌಕರಿ ಖಾಯಂ, ಗೌರವಧನ ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
MRW, VRW ಹಾಗೂ URW ಕಾರ್ಯಕರ್ತರಿಗೆ ಸದ್ಯ 9 ಸಾವಿರ ಗೌರವ ಧನ ಸಿಗುತ್ತಿದ್ದು, ಇದರಲ್ಲಿಯೇ ಸ್ವತಂತ್ರವಾಗಿ ಸ್ವಾಭಿಮಾನಿಗಳಾಗಿ ಬದುಕು ಕಟ್ಟಿಕೊಂಡು ಇದ್ದೀರಾ. ಕನಿಷ್ಠ ವೇತನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶೀಘ್ರವೇ ನಿಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗಲಿವೆ ಎಂದು ಹೇಳಿದರು.
ಕಳೆದ ಒಂದೂವರೆ ವರ್ಷಗಳಿಂದ ವಿಕಲ ಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವೆ. ಜನ ಕೊಟ್ಟ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಸಿ ಕೊಳ್ಳುತ್ತಿದ್ದೇನೆ. ನವಕರ್ನಾಟಕ ಸಂಘಟನೆ ಎಲ್ಲರ ಕಣ್ಣನ್ನು ತೆರೆಸುವ ಕೆಲಸ ಮಾಡುತ್ತಿದೆ. ಸ್ವಾಭಿಮಾನಿಯಾಗಿ ಬದುಕು ಕಂಡಿಕೊಂಡಿರುವವರ ಬೇಡಿಕೆಗಳನ್ನು ಈಡೇರಿಸಲು ನಾನು ಸದಾ ಬದ್ಧನಾಗಿರುತ್ತೇನೆ. ಕನಿಷ್ಠ ವೇತನ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಗಮನಕ್ಕೆ ತರಲಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಂಸ್ಥಾಪಕ ಅಧ್ಯಕ್ಷರಾದ ಅಂಬಾಜಿ ಮೇಟಿ, ಗೌರವಾಧ್ಯಕ್ಷರಾದ ದತ್ತಾತ್ರೇಯ ಆರ್.ಕುಡಕಿ, ರಾಜ್ಯಾಧ್ಯಕ್ಷರಾದ ಫಕೀರ್‌ಗೌಡ ಸಿ ಪಾಟೀಲ್ ಸೇರಿದಂತೆ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.