23/12/2024
IMG-20241210-WA0001

ಬೆಂಗಳೂರು-೧೦: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್ ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಿಗ್ಗೆ ೨.೪೫ ಕ್ಕೆ  ವಿಧಿವಶರಾಗಿದ್ದಾರೆ

ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಕೃಷ್ಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೃತ್ತಿಯಲ್ಲಿ ವಕೀಲರಾಗಿದ್ದ ಎಸ್.ಎಂ.ಕೃಷ್ಣ ಅವರು, 1962 ರಲ್ಲಿ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಿಂದ 2004 ರ ವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು, ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿಯೂ ಕರ್ತವ್ಯ (2004ರಿಂದ 2008) ನಿರ್ವಹಿಸಿದ್ಧರು. ಕೃಷ್ಣ ಅವರ ರಾಜಕೀಯ ಮುತ್ಸದ್ದಿತನಕ್ಕೆ 2023 ರಲ್ಲಿ ಕೇಂದ್ರ ಸರಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಕೃಷ್ಣ ಅವರು ವಿದೇಶಾಂಗ ಸಚಿವರಾಗಿಯೂ ಕೆಲಸ ಮಾಡಿದ್ದರು. 1971ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದ ಕೃಷ್ಣ ಅವರು, 2017ರ ಮಾರ್ಚ್ ನಲ್ಲಿ ಇದ್ದಕ್ಕಿದ್ದಂತೆ ಕಾಂಗ್ರೆಸ್ ನಿಂದ ದೂರವಾಗಿ ಬಿಜೆಪಿ ಸೇರಿದರು. 2023ರ ವರೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿಯೇ ಉಳಿದಿದ್ದರು.

ಎಸ್.ಎಂ.ಕೃಷ್ಣ ಅವರು ಪತ್ನಿ ಪ್ರೇಮಾ ಸೇರಿದಂತೆ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅವರ ಅಗಲಿದ್ದಾರೆ. ಅವರ ಅಳಿಯ ಕಾಫಿ ಢೇ ಮಾಲಕ ಸಿದ್ಧಾರ್ಥ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ಅವರ ನಿವಾಸದಲ್ಲಿ ಇಡೀ ದಿನ ಇರಿಸಲಾಗುವುದು. ನಂತರ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ‌.

Leave a Reply

Your email address will not be published. Required fields are marked *

error: Content is protected !!