ಬೆಳಗಾವಿ-೦೯ :ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡೆವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನ ಮುಂದೆ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಸೋಮವಾರ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ, ಪತ್ರಿಪಕ್ಷಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊAದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ. ವೀರಶೈವ ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿಗಳನ್ನು 2ಎ ಸೇರಿಸಲು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವAತೆ ಪಂಚಮಸಾಲಿ ಹೋರಟಗಾರರಿಗೆ ತಿಳಿಸಿದ್ದೇನೆ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಪಂಚಮಸಾಲಿಗಳನ್ನು 2ಎ ಸೇರಿಸಿಲ್ಲ ಬದಲಾಗಿ, ಅಲ್ಪಸಂಖ್ಯಾತ ಮುಸ್ಲಿಂರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿಗೆ ತಲಾ ಶೇ.2 ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು. ಇದನ್ನು ಆಕ್ಷೇಪಿಸಿ ಮುಸ್ಲಿಂರು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹಿಂದಿನ ರಾಜ್ಯ ಸರ್ಕಾರ ಮುಸ್ಲಿಂರ ಮೀಸಲಾತಿ ರದ್ದು ಪಡಿಸುವುದಿಲ್ಲ. ಯತಾಸ್ಥಿತಿಯನ್ನು ಮುಂದುವರಿಸಿಕೊAಡು ಹೋಗುವುದಾಗಿ ಅಫಿಡೆವಿಡ್ ಸಲ್ಲಿಸಿದೆ. ಇದರ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾದ್ಯವಿಲ್ಲ. ಇದರ ಪ್ರತಿಯನ್ನು ನಾಳೆಯೇ ಸದನ ಮುಂದೆ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸ್ಪಷ್ಟಪಡಿಸಿದರು.
ಶಾಸಕ ಅರವಿಂದ ಬೆಲ್ಲದ್ ಮಂಗಳವಾರ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಡೆಯಲಿದೆ. ಆದ್ದರಿಂದ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಬುಧವಾರ ಸದನದ ಮುಂದೆ ಮಂಡಿಸುವಂತೆ ಮುಖ್ಯಮಂತ್ರಿಗಳಲ್ಲಿ ಸಭಾಧ್ಯಕ್ಷರ ಮೂಲಕ ಕೋರಿದರು.
*ಮೀಸಲಾತಿ ಹೋರಾಟಕ್ಕೆ ಅನುಮತಿ:*
ಸುಮಾರು 5000 ಟ್ಯಾಕ್ಟರ್‌ಗಳೊಂದಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಈ ರೀತಿಯಾಗಿ ಸಾವಿರಾರು ಸಂಖ್ಯೆಯಲ್ಲಿ ಟ್ಯಾಕ್ಟರ್‌ಗಳು ಆಗಮಿಸಿದರೆ ಕಾನೂನು ಸುವ್ಯವಸ್ಥೆ ಧಕ್ಕೆ ಬರುತ್ತದೆ. ಈ ಹಿನ್ನಲೆಯಲ್ಲಿ ಟ್ಯಾಕ್ಟರ್‌ಗಳೊಂದಿಗೆ ಹೋರಾಟಕ್ಕೆ ಅವಕಾಶ ನೀಡಲು ಸರ್ಕಾರ ನಿರಾಕರಿಸಿದೆ. ನಿಯಮಿತ ಸಂಖ್ಯೆಯಲ್ಲಿ ಟೆಂಪೋ, ಟ್ಯಾಕ್ಸಿ, ಕಾರುಗಳ ಮೂಲಕ ಹೋರಾಟಗಾರರು ಆಗಮಿಸಿ ಶಾಂತವಾಗಿ ಪ್ರತಿಭಟನೆ ನಡೆಸಲು ಯಾವುದೇ ಅಡ್ಡಿಯಿಲ್ಲ. ಸರ್ಕಾರ ಇದಕ್ಕೆ ಅನುಮತಿ ನೀಡಲಿದೆ. ಈ ವಿಚಾರವಾಗಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸದನದಲ್ಲಿ ಸ್ಪಷ್ಟಪಡಿಸಿದರು.
*19ಕ್ಕೆ ಅಧಿವೇಶನ ಮುಕ್ತಾಯ : ಸಭಾಧ್ಯಕ್ಷ ಯು.ಟಿ.ಖಾದರ್*
ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.20 ರಿಂದ 22 ವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಡಿ.20ರ ಬದಲಾಗಿ 19 ರಂದು ಚಳಿಗಾಲದ ಅಧಿವೇಶನವನ್ನು ಮುಕ್ತಾಯಗೊಳಿಸಲಾಗುವುದು ಎಂದು ಸದನದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಕಟಿಸಿದರು.