ಬೆಳಗಾವಿ-೦೮:ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ನೀಡುವದಾಗಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಭರವಸೆ ನೀಡಿರುವದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸಿದೆ.
ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಬಸವರಾಜ್ ಹೊರಟ್ಟಿ ಅವರಿಗೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಇರುವ ಕಳಕಳಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸವರಾಜ್ ಹೊರಟ್ಟಿ ಅವರು ಉತ್ತರ ಕರ್ನಾಟಕದ ರೈತ ಮುಖಂಡರನ್ನು,ಬುದ್ಧಿಜೀವಿ ಗಳನ್ನು,ವಿವಿಧ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ ಬೆಳಗಾವಿಯ ಅಧಿವೇಶನದಲ್ಲಿ ಯಾವ ಯಾವ ವಿಷಯಗಳ ಬಗ್ಗೆ ಚರ್ಚೆ ಆಗಬೇಕು ಎನ್ನುವದನ್ನು ಪಟ್ಟಿ ಮಾಡಿದ್ದು ಬಸವರಾಜ್ ಹೊರಟ್ಟಿ ಅವರು ಸಿದ್ಧಪಡಿಸಿರುವ ಪಟ್ಟಿಯಲ್ಲಿ ನಾಡದ್ರೋಹಿ ಎಂಈಎಸ್ ಸಂಘಟನೆಯನ್ನು ನಿಷೇಧಿಸುವ ವಿಷಯವೂ ಸೇರಲಿ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಎಂಈಎಸ್ ಮುಖಂಡರು ಗಡಿಭಾಗದ ಬೆಳಗಾವಿಯಲ್ಲಿ ರಾಜಕೀಯ ಲಾಭಕ್ಕಾಗಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ಬೆಳಗಾವಿಯ ಶಾಂತಿಗೆ ಧಕ್ಕೆ ತರುತ್ತಿದ್ದು ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಆಚರಿಸುವ ಮೂಲಕ ಕನ್ನಡಿಗರಿಗೆ,ಕನ್ನಡದ ಸರ್ಕಾರಕ್ಕೆ ಸವಾಲು ಹಾಕಿ ನಮ್ಮ ನೆಲ,ಜಲ,ಭಾಷೆಗೆ ಅವಮಾನ ಮಾಡುತ್ತಿರುವ ಎಂಈಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವ ವಿಚಾರವೂ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿ ಎಂಈಎಸ್ ನಿಷೇಧಿಸುವ ಸರ್ವಾನುಮತದ ನಿರ್ಣಯ ಆಗಲಿ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುವ ಸಂಧರ್ಭದಲ್ಲಿ ನಾಡದ್ರೋಹಿ ಎಂಈಎಸ್ ನಾಯಕರು ಮರಾಠಿ ಮಹಾ ಮೇಳಾವ್ ನಡೆಸುವ ಮೂಲಕ ಪದೇ ಪದೇ ಕಿರಿಕ್ ಮಾಡುತ್ತಲೇ ಬಂದಿದ್ದು ಈ ಬಾರಿ ಮರಾಠಿ ಮೇಳಾವ್ ಗೆ ಅನುಮತಿ ನೀಡುವದಿಲ್ಲ,ಕಾನೂನು ಬಾಹಿರವಾಗಿ ಅವರು ಮೇಳಾವ್ ನಡೆಸಲು ಮುಂದಾದಲ್ಲಿ ಅವರ ವಿರುದ್ಧ ಕಠಣ ಕ್ರಮ ಜರುಗಿಸಿ ಅನುಮತಿ ಇಲ್ಲದೇ ಅವರಿಗೆ ಮೇಳಾವ್ ಮಾಡಲು ಅವಕಾಶ ನೀಡುವದಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ,ಮಹಾನಗರ ಪೋಲೀಸ್ ಆಯುಕ್ತ ಯಡಾ ಮಾರ್ಟಿನ್, ಮತ್ತು ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿ ಭೀಮಾಶಂಕರ ಗುಳೇದ ಅವರು ಭರವಸೆ ನೀಡಿರುವದನ್ನು ಕರವೇ ಸ್ವಾಗತಿಸಿದ್ದು ಬೆಳಗಾವಿ ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಮನವಿ ಮಾಡಿದೆ.
ಎಂಈಎಸ್ ಸಂಘಟನೆಯನ್ನು ನಿಷೇಧ ಮಾಡುವ ವಿಚಾರವನ್ನು ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಗಳ ಪಟ್ಟಿಯಲ್ಲಿ ಸೇರಿಸುವಂತೆ ಬಸವರಾಜ್ ಹೊರಟ್ಟಿ ಅವರನ್ನು ಭೇಟಿಯಾಗಿ ಮನವಿ ಅರ್ಪಿಸುವದಾಗಿ ದೀಪಕ ಗುಡಗನಟ್ಟಿ ಹೇಳಿದ್ದಾರೆ.