ಬೆಂಗಳೂರು-೨೯: ರಾಜ್ಯದಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು; ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ನಗರದ ಜವಾಹರ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ- 2024 ಹಾಗೂ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದ ನಂತರ ಸಚಿವರು ಮಾತನಾಡಿದರು.
ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಮೂಲಕ ಮಕ್ಕಳಿಗಾಗಿಯೇ ಹತ್ತು ಹಲವು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈಗಾಗಲೇ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟೆಸ್ಸರಿಗಳನ್ನಾಗಿ ಮೇಲ್ದರ್ಜೇರಿಸಲಾಗಿದೆ ಎಂದು ತಿಳಿಸಿದರು.
*ಮಕ್ಕಳು ದೇಶದ ಶಕ್ತಿ- ಭವಿಷ್ಯ*
ಮಕ್ಕಳು ಎಂದರೇ ಒಂದು ರೀತಿ ಚಂಚಲ. ಮಕ್ಕಳೆಂದರೆ ಎಲ್ಲರಿಗೂ ಪ್ರೀತಿ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ ನೆಹರು ಮಕ್ಕಳ ಮೇಲೆ ವಿಶೇಷವಾದ ಪ್ರೀತಿ, ಕಾಳಜಿ ಹೊಂದಿದ್ದರು. ಏಕೆಂದರೆ, ಇಂದಿನ ಮಕ್ಕಳು ನಾಡಿನ, ದೇಶದ ಶಕ್ತಿ ಮತ್ತು ಭವಿಷ್ಯ ಎಂದು ಭಾವಿಸಿದ್ದರು ಎಂದು ಸಚಿವರು ಹೇಳಿದರು.
ಭಾರತ 75 ವರ್ಷಗಳ ಹಿಂದೆ ಹೇಗಿತ್ತು, ಜನರ ಪರಿಸ್ಥಿತಿ ಹೇಗಿತ್ತು ಅಂದಿನ ಶಿಕ್ಷಣ ಹೇಗಿತ್ತು ಎನ್ನುವುದನ್ನು ಊಹಿಸಲು ಕೂಡ ಆಗದು. ಅತ್ಯಂತ ಬಡತನದ ಪರಿಸ್ಥಿತಿ ಇತ್ತು. ಆಗ ದೇಶದ ಜನಸಂಖ್ಯೆ ಕೇವಲ 35 ಕೋಟಿ. ಆದರೆ, ಈಗ ದೇಶದ 135 ಕೋಟಿಗಿಂತಲೂ ಹೆಚ್ಚಿದೆ. ಇಷ್ಟೊಂದು ಜನಸಂಖ್ಯೆ ಇದ್ದರೂ ಭಾರತ ಈಗ ವಿಶ್ವದ ಹಿರಿಯಣ್ಣನಾಗುವ ಎಲ್ಲ ಲಕ್ಷಣಗಳು ನಮ್ಮ ದೇಶಕ್ಕಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಅಂದಿನ ಮಕ್ಕಳೇ ಹಿರಿಯ ನಾಗರಿಕರಾಗಿ ದೇಶವನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದರು.
*ದೇಶದ 75 ವರ್ಷಗಳ ಪರಿಸ್ಥಿತಿ ಊಹಿಸಲಾಗದು*
ದೇಶದ 75 ವರ್ಷಗಳ ಹಿಂದಿನ ಜನರು ಬಡತನದಲ್ಲಿ ಹುಟ್ಟಿ, ಕರೆಂಟ್ ಇಲ್ಲದ ಸಂದರ್ಭದಲ್ಲಿ ಓದಿ ಮೇರು ವ್ಯಕ್ತಿಗಳಾಗಿ ನಮ್ಮೆಗೆಲ್ಲ ಆದರ್ಶರಾಗಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಅದು ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು. ಎಂತಹ ಪರಿಸ್ಥಿತಿಯಲ್ಲಿ ಎಷ್ಟು ದೊಡ್ಡವರಾಗಿ ಬೆಳೆದರು; ದೇಶಕ್ಕೆ ಸಂವಿಧಾನವನ್ನು ಕೊಟ್ಟರು. ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾದರು. ಆಗಿನ ಮಕ್ಕಳು ಬಹಳ ಕಷ್ಟುಪಟ್ಟು ಭಾರತವನ್ನು ಕಟ್ಟಿ, ಇಂದು ವಿಶ್ವದಲ್ಲೇ ನಂಬರ್ ಒನ್ ಆಗಲು ಶ್ರಮಿಸಿದ್ದಾರೆ. ಅವರು ಅನುಭವಿಸಿದ ಕಷ್ಟ ಇಂದಿನ ಮಕ್ಕಳಿಲ್ಲ. ಆದರೆ, ಇಂದಿನ ಮಕ್ಕಳು ವಿಶ್ವಮಟ್ಟದಲ್ಲಿ ಪ್ರಜ್ವಲಿಸಬೇಕು ಎಂದು ಸಚಿವರು ಆಶಿಸಿದರು.
*ʼಮಾತೃಲಕ್ಷ್ಮಿʼ ಬಿಡುಗಡೆ*
ನಂತರ ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ವತಿಯಿಂದ ಹೊರತಂದ ಇಲಾಖೆಯ ಯೋಜನೆಯ ಮತ್ತು ಕಾರ್ಯಕ್ರಮಗಳ ಮಾಹಿತಿ ಕೈಪಿಡಿ- 2024 ʼಮಾತೃಲಕ್ಷ್ಮಿʼ ಯನ್ನು ಬಿಡುಗಡೆ ಮಾಡಿದರು.
ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್. ಎಚ್. ಕೋನರೆಡ್ಡಿ, ಸಮಿತಿಯ ಸದಸ್ಯರು ಮತ್ತು ಶಾಸಕರಾದ ಕೊತ್ತನೂರು ಮಂಜುನಾಥ್, ಮಂಜುಳಾ ಅರವಿಂದ ಲಿಂಬಾವಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಬಾಲಭವನದ ಅಧ್ಯಕ್ಷ ಬಿ.ಆರ್. ನಾಯ್ಡು, ಧಾರವಾಡ ಭಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ಇಲಾಖಾ ನಿರ್ದೇಶಕರಾದ ಸಿದ್ದೇಶ್ವರ, ಜಂಟಿ ನಿರ್ದೇಶಕರಾದ ಬಿ.ಎಚ್. ನಿಶ್ಚಲ್ ಮತ್ತಿತರರು ಪಾಲ್ಗೊಂಡಿದ್ದರು.