ಬೆಳಗಾವಿ-೨೯:ಮಹಿಳೆಯರು ಪರಂಪರಾಗತವಾಗಿದ್ದ ಸಮಸ್ಯೆಗಳ ಜೊತೆಗೆ ಇಂದಿನ ಸಾಮಾಜಿಕ ಜಾಲತಾಣಗಳಿಂದಲೂ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಜೂಡೋದಲ್ಲಿ ರಾಷ್ಟ್ರೀಯ ಸ್ವರ್ಣ ಪದಕ ವಿಜೇತ ಪಾಯಲ್ ವಿಜಯ ನಾಯ್ಡು ಅವರು ಕಳವಳ ವ್ಯಕ್ತಪಡಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹಿಳೆ ಸ್ವಯಂ ರಕ್ಷಣೆ ಮತ್ತು ತಂತ್ರಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಬುಧವಾರದಂದು ಹಮ್ಮಿಕೊಂಡಿದ್ದರು. ಮುಖ್ಯ ಅತಿಥಿಗಳಾದ ಜೂಡೋದಲ್ಲಿ ರಾಷ್ಟ್ರೀಯ ಸ್ವರ್ಣ ಪದಕ ವಿಜೇತ ಪಾಯಲ್ ವಿಜಯ ನಾಯ್ಡು ಅವರು ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಮಹಿಳೆಯರ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಹೆಚ್ಚಾಗುತ್ತಿವೆ. ಇವುಗಳ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಅದನ್ನು ನಿಯಂತ್ರಕ್ಕೆ ತರುವ ಮಾರ್ಗೋಪಾಯಗಳತ್ತ ಶೀಘ್ರವಾಗಿ ಗಮನಹರಿಸಬೇಕು. ಮಹಿಳೆಯರು ಕೂಡ ತಮ್ಮ ರಕ್ಷಣೆಯ ಕುರಿತು ಸದಾ ಜಾಗೃತರಾಗಿರಬೇಕು. ಮಹಿಳೆಗೆ ತಮ್ಮ ಸ್ವರಕ್ಷಣೆಗಾಗಿ ಸ್ವಯಂ ರಕ್ಷಣಾ ತಂತ್ರಗಳ ಕಲಿಕೆಯ ಅವಶ್ಯಕತೆಯಿದೆ. ಅದರ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಅವುಗಳ ಕುರಿತು ವಿವರಿಸಿದರು. ತಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ತೋರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಅವರು ಇತ್ತೀಚೆಗೆ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ, ಕಿರುಕುಳ ದಿನೇ ದಿನೇ ಹೆಚ್ಚುತ್ತಿವೆ. ಮಹಿಳೆಯರು ತಮ್ಮ ಆತ್ಮ ರಕ್ಷಣೆಗಾಗಿ ದೈಹಿಕವಾಗಿ, ಮಾನಸಿಕವಾಗಿ ಸುದೃಢ ಹೊಂದಿರಬೇಕು. ತನಗೆ ಎದುರಾಗುವ ಸಂಕಷ್ಟದಲ್ಲಿ ತಕ್ಷಣ ಮಾಡಬೇಕಾದ ರಕ್ಷಣಾ ತಂತ್ರಗಳ ಬಗ್ಗೆ ತರಬೇತಿ ಪಡೆದುಕೊಳ್ಳಬೇಕು. ಇದರಿಂದ
ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕೌಶಲ್ಯದೊಂದಿಗೆ ಆತ್ಮವಿಶ್ವಾಸ ಪಡೆಯುತ್ತಾಳೆ. ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರಲ್ಲಿ ಭದ್ರತೆಯ ಭಾವನೆಗಳನ್ನು ಹೆಚ್ಚಿಸುತ್ತವೆ ಎಂದರು.
ವಿದ್ಯಾರ್ಥಿನಿಯರಾದ ಯೋಗಿತಾ ಪೂಜಾರಿ ನಿರೂಪಿಸಿದರು, ಸೇಜಲ್ ಮಗದುಮ್ ಪರಿಚಯಿಸಿದರು. ರೇವತಿ ಭೋಸಲೆ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕಿಯರು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.