23/12/2024
IMG-20241120-WA0001

ಬೆಳಗಾವಿ-೨೦: ನಮ್ಮಿಂದ ನೀವು, ನಿಮ್ಮಿಂದ ನಾವು ಎನ್ನುವುದೇ ಸಹಕಾರಿ ತತ್ವ. ಸಹಕಾರಿ ಕ್ಷೇತ್ರ ಬೆಳೆದರೆ ರಾಜ್ಯ ಬೆಳೆಯುತ್ತದೆ, ದೇಶ ಬೆಳೆಯುತ್ತದೆ. ರಾಜಕೀಯ ರಹಿತವಿದ್ದಾಗ ಮಾತ್ರ ಸಹಕಾರ ಕ್ಷೇತ್ರ ವಿಶ್ವಾಸಾರ್ಹವಾಗಿ ಬೆಳೆಯಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಕೆ.ಎಲ್.ಇ ಸಂಸ್ಥೆಯ ಜಿ.ಎನ್.ಎಂ.ಸಿ ಡಾ.ಬಿ.ಎಸ್ ಜೀರಗೆ ಸಭಾಂಗಣದಲ್ಲಿ ಬುಧವಾರ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ -2024ರ ಸಮಾರೋಪ ಕಾರ್ಯಕ್ರಮದಲ್ಲಿ, ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ಇಡೀ ವ್ಯವಸ್ಥೆ ಸಹಕಾರ ತತ್ವದ ಮೇಲೆಯೇ ನಿಂತುಕೊಂಡಿದೆ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಪರಸ್ಪರ ಸಹಕಾರದಿಂದಲೇ ಬದುಕುತ್ತೇವೆ. ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎನ್ನುವುದು ಸಹಕಾರ ತತ್ವದ ಮೂಲ ಆಶಯ ಎಂದರು.

ಸಹಕಾರ ಚಳುವಳಿಯ ರೂವಾರಿಯೇ ನಮ್ಮ ಅಂದಿನ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರು. ಸಹಕಾರ ತತ್ವ, ಆಚರಣೆಯಲ್ಲಿ ನೆಹರೂ ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆ ಇತ್ತು. ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ನೆಹರು ಅವರ ಶ್ರಮ ಅಪಾರವಾಗಿತ್ತು. ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ತತ್ವದ ಮೊರೆ ಹೋಗಿದ್ದರು ಎಂದು ಸಚಿವರು ಸ್ಮರಿಸಿದರು.

ಸಹಕಾರ ತತ್ವದಿಂದಲೇ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ನೆಹರು ಅವರು ನಂಬಿದ್ದರು. ರಾಷ್ಟ್ರದಲ್ಲಿ ಸಹಕಾರ ಚಳವಳಿ ಪ್ರಗತಿಪಥದಲ್ಲಿ ಸಾಗಲು ಕ್ರಮಗಳನ್ನು ಕೈಗೊಂಡರು. ನೆಹರು ಅವರ ದೂರದೃಷ್ಟಿಯ ಫಲದಿಂದ ಇಂದು ಸಹಕಾರ ಚಳವಳಿ ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ ಎಂದರು.

ಇಡೀ ರಾಷ್ಟ್ರದ ಸಹಕಾರ ತತ್ವಕ್ಕೆ ನಮ್ಮ ಕರ್ನಾಟಕದ ಕೊಡುಗೆ ಅನನ್ಯವಾಗಿದೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ರಾಜ್ಯ. 1904ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ ಅವರು ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು. ಆ ನಂತರದಲ್ಲಿ ಸಹಕಾರ ಚಳವಳಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತ ಹೋಯಿತು ಎಂದು ಸಚಿವರು ಹೇಳಿದರು.

ಕರ್ನಾಟಕದ ಆಕರ್ಥಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಬಹುತೇಕ ರಾಜಕಾರಣಿಗಳು ಸಹಕಾರ ಕ್ಷೇತ್ರದಿಂದಲೇ ಮೇಲೆ ಬಂದವರು. ಇಡೀ ಕೃಷಿ ಕ್ಷೇತ್ರ ಕೂಡ ಸಹಕಾರ ಸಂಘಗಳ ಮೇಲೆಯೇ ಅವಲಂಭಿಸಿದೆ. ಸಹಕಾರ ಸಂಘಗಳ ಮೇಲೆ ನಮ್ಮ ರೈತರಿಗೆ ಅಪಾರವಾದ ನಂಬಿಕೆ, ವಿಶ್ವಾಸವಿದೆ. ರೈತರಿಗೆ ಅಗತ್ಯವಿರುವ ಸಾಲ ನೀಡುವ ಮೂಲಕ ಸಹಕಾರ ಸಂಘಗಳು ರೈತರ ಬೆನ್ನಿಗೆ ನಿಲ್ಲುತ್ತವೆ. ರಾಜಕೀಯದಲ್ಲಿ ಸಹಕಾರ ಇರಬೇಕು, ಆದರೆ ಸಹಕಾರ ಸಂಘಗಳಲ್ಲಿ ರಾಜಕೀಯ ಇರಬಾರದು ಎಂದರು.

ಸಹಕಾರ ಸಂಘಗಳಲ್ಲಿ ರಾಜಕೀಯ ಸೇರಿದರೆ ಅದರ ಅವನತಿ ಆರಂಭವಾದಂತೆ. ಅತ್ಯಂತ ನೋವಿನ ಸಂಗತಿ ಎಂದರೆ, ರಾಜಕೀಯ ಸೇರಿದ್ದರಿಂದಲೆ ನಮ್ಮ ರಾಜ್ಯದಲ್ಲಿ ಹಲವಾರು ಸಹಕಾರ ಸಂಘಗಳು ಬಾಗಿಲು ಮುಚ್ಚಿವೆ. ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಸಹಕಾರ ತತ್ವದ ಮೇಲೆ ಆರಂಭವಾಗಿ ಮುನ್ನಡೆಯುತ್ತಿವೆ.
ಕೆಲವು ಮುಚ್ಚಿದ್ದರೂ ಇನ್ನೂ ಅನೇಕ ಕಾರ್ಖಾನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಪಾರದರ್ಶಕವಾಗಿ ನಡೆದಾಗ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗಲು ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಶಾಸಕರಾದ ಆಸೀಫ್ ಸೇಠ್, ಅಶೋಕ್ ಪಟ್ಟಣ್, ಲಕ್ಷ್ಮಣ್ ಸವದಿ, ಕೆ.ಎಲ್.ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ, ನಂಜನಗೌಡ ಸಿ.ಎ, ಜಗದೀಶ್ ಕವಟಗಿಮಠ್, ಈರಣ್ಣ ಕಡಾಡಿ, ಲಕ್ಷಣರಾವ್ ಚಿಂಗಳೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ್, ಅಪ್ಪಾಸಾಹೇಬ್ ಕುಲಗುಡೆ, ಶಾಸಕರಾದ ದುರ್ಯೋಧನ ಐಹೊಳೆ, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

error: Content is protected !!