ಬೆಳಗಾವಿ-೧೫ : ಕಳೆದ 7 ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಗ್ರಾಮಗಳ ಚಿತ್ರಣವನ್ನೇ ಬದಲಾಯಿಸಿದ್ದೇನೆ. ಅದಕ್ಕೆ ತಕ್ಕಂತೆ ಜನರು ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ, ಕೆಕೆ ಕೊಪ್ಪ, ಸಿದ್ದನಬಾವಿ ಮೊದಲಾದ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಯಾವುದೇ ಜಾತಿ, ಪಕ್ಷ ನೋಡದೆ ಜನರು ಹೇಳಿದ ಕೆಲಸಗಳನ್ನೆಲ್ಲ ಮಾಡಿಸುತ್ತಿದ್ದೇನೆ. ಸರಕಾರವನ್ನೇ ಕ್ಷೇತ್ರಕ್ಕೆ ತೆಗೆದುಕೊಂಡು ಬಂದ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದರಿಂದಾಗಿ ನನ್ನಲ್ಲಿ ಧನ್ಯತಾ ಭಾವನೆ ಮೂಡಿದೆ. ಅದಕ್ಕೆ ತಕ್ಕಂತೆ ಜನರು ಸಹ ನನ್ನ ಬೆಂಬಲಕ್ಕೆ ನಿಲ್ಲಬೇಕು. ಜನಪ್ರತಿನಿಧಿಗಳಾದವರು ಇದನ್ನು ನಿರೀಕ್ಷಿಸುವುದು ಸಹಜ. ಪರಸ್ಪರ ಸಹಕಾರ ಇದ್ದಾಗ ಮಾತ್ರ ಯಾವುದೇ ಕೆಲಸಕ್ಕೂ ಬೆಲೆ ಇರುತ್ತದೆ ಎಂದು ಸಚಿವರು ಹೇಳಿದರು.
ಹಿರೇಬಾಗೇವಾಡಿಯಲ್ಲಿ ಹಲವು ಕೋಟಿ ರೂ.ಗಳ ಕಾಮಗಾರಿಗಳಾಗಿವೆ. ವಾರಕ್ಕೊಂದು ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಲಾಗುತ್ತಿದೆ. ಜಾತ್ರೆಯ ಸಂದರ್ಭದಲ್ಲಿ 19 ದೇವಸ್ಥಾನಗಳಿಗೆ ಸುಣ್ಣ ಬಣ್ಣ ಮಾಡಿಸಿದ್ದೇನೆ. ಸ್ವಂತ ಬಾವಿಯಿಂದ ನೀರು ಸರಬರಾಜು ಮಾಡಿಸಿದ್ದೇನೆ. ನಿರ್ಲಕ್ಷಿಸಲ್ಪಟ್ಟು ಎಂದೂ ನೀರು ನಿಲ್ಲದ ಸಿದ್ಧನಬಾವಿ ಕೆರೆಯಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ನೀರು ನಿಲ್ಲುವಂತೆ ಮಾಡಿದ್ದೇನೆ. ಇದಕ್ಕಾಗಿ ಒಂದು ಕೋಟಿ ರೂ. ವೆಚ್ಚ ಮಾಡಿದ್ದೇನೆ. ಇಷ್ಟೊಂದು ಯೋಜನೆಗಳನ್ನು ತಂದಾಗ ನನ್ನೊಂದಿಗೆ ನೀವೆಲ್ಲ ನಿಲ್ಲಬೇಕು, ಅದೇ ಪ್ರೀತಿ, ವಿಶ್ವಾಸವನ್ನು ತೋರಿಸಬೇಕು ಎನ್ನುವುದು ನನ್ನ ಸಹಜವಾದ ಅಪೇಕ್ಷೆ. ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೀರಿ ಎಂದು ನಿರೀಕ್ಷಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸರಕಾರದ ಅತೀ ದೊಡ್ಡ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯನ್ನು ಮಧ್ಯವರ್ತಿಗಳೇ ಇಲ್ಲದೆ ಜನರಿಗೆ ತಲುಪಿಸುತ್ತಿದ್ದೇನೆ. ಹಿರೇಬಾಗೇವಾಡಿಯ ಸೋಮೇಶ್ವರ ದೇವಸ್ಥಾನದ ಸಾಂಸ್ಕೃತಿಕ ಭವನ ನಿರ್ಮಾಣ, ಹಲವು ಅಂಗನವಾಡಿ ಕಟ್ಟಡ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಗಟಾರ ನಿರ್ಮಾಣ, ಪಶು ಚಿಕಿತ್ಸಾಲಯ ನವೀಕರಣ ಎಲ್ಲವನ್ನೂ ಮಾಡಿಸುತ್ತಿದ್ದೇನೆ. ಚುನಾವಣೆ ಬಂದಾಗಷ್ಟೆ ಕೆಲಸ ಮಾಡುವವಳು ನಾನಲ್ಲ. ಮಾತು ಕೊಟ್ಟ ಮೇಲೆ ತಪ್ಪುವವಳಲ್ಲ, ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇನೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರು, ಹಿಂದಿನವರು10 ರೂ. ಕೆಲಸವನ್ನೂ ಮಾಡಿರಲಿಲ್ಲ. ನೀವು ಬಂದ ನಂತರವೇ ನಾವು ಅಭಿವೃದ್ಧಿ ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲ ಪ್ರಾಮಾಣಿಕವಾಗಿ ನಿಮ್ಮ ಜೊತೆಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಸಿ.ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್, ಸಿಡಿಪಿಒ ಸುಮಿತ್ರಾ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ಮಿತಾ ಪಾಟೀಲ, ಸ್ವಾತಿ ಇಟಗಿ, ಶ್ರೀಕಾಂತ್ ಮಾಧುಭರಮಣ್ಣವರ್, ಸುರೇಶ ಇಟಗಿ, ಅಡಿವೇಶ ಇಟಗಿ, ಗೌಡಪ್ಪ ಹಾದಿಮನಿ, ಗೌಸ್ ಜಾಲಿಕೊಪ್ಪ, ಬಿ.ಎನ್.ಪಾಟೀಲ, ಅನಿಲ ಪಾಟೀಲ, ನಿಂಗಪ್ಪ ತಳವಾರ, ಪ್ರಕಾಶ ಜತ್ತಿ, ಸಯ್ಯದ ಸನದಿ, ಆನಂದ ಪಾಟೀಲ, ಶೃತಿ ಸಿದ್ದಣ್ಣವರ್, ಎನ್.ಎಫ್. ಕಂಠಿ, ಶಿವಪ್ಪ ತೋಟಗಿ, ಸಿಕಂದರ ಬಾಗವಾನ, ಚಿನ್ನಪ್ಪ ಕೊಂಡಗುರಿ ಮೊದಲಾದವರು ಹಾಜರಿದ್ದರು.