23/12/2024
IMG-20241031-WA0049

ಅಂಗವೈಕಲ್ಯ ಒಂದು ಸಾಮಾಜಿಕ ಪಿಡುಗು ಎಂದು ಗೊಣಗುತ್ತಿರುವವರಿಗೆ ನಾನೂ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತನ್ನ ವಿಶೇಷ ಶಕ್ತಿಯಿಂದ ತೋರಿಸಿ ಎಲ್ಲ ವಿಕಲಚೇತನ ಮಕ್ಕಳಿಗೆ ಮಾದರಿಯಾದ ಬಿಮ್ಸ್ ಸಂಸ್ಥೆಯ ಹೆಮ್ಮೆಯ ವೈದ್ಯಕೀಯ ವಿದ್ಯಾರ್ಥಿನಿಯೇ ಕುಮಾರಿ ಪಂಕಜಾ ರೇವಣಕರ. ಇವಳು ದ್ವಿತಿಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ. ಇವಳಿಗೆ ಬಲಗಾಲಿನಲ್ಲಿ ನಡೆಯಲು ಆಗದೇ ಇರುವ ಸ್ಥಿತಿಯಿಂದ ಸ್ಪ್ಲೆ‌ಂಟ್ ಸಹಾಯದಿಂದ ನಡೆಯುತ್ತಾಳೆ. ತನ್ನ ಎಲ್ಲ ನಿತ್ಯ ಚಟುವಟಿಕೆಗಳನ್ನು ಎಡಗಾಲಿನಿಂದ ಮಾತ್ರ ಮಾಡುತ್ತಾಳೆ. ಕೈ ಇದ್ದರೂ ಒಂದು ಕೈ ಸ್ವಾದೀನದಲ್ಲಿ ಇಲ್ಲ. ಕೇವಲ ಒಂದು ಕೈಯಿಂದ ಮಾತ್ರ ತನ್ನ ಇನ್ನೀತರ ಕೆಲಸಗಳನ್ನ ನಿರ್ವಹಿಸುತ್ತಾಳೆ. ಅಂಗವಿಕಲರ ಬಗ್ಗೆ ಅನುಕಂಪ ಬೇಡ ಅವಕಾಶ ಕೊಡಿ ಎಂದು ದಿಟ್ಟವಾಗಿ ಮಾತನಾಡುತ್ತಾಳೆ.
ಇತ್ತೀಚಿಗೆ ಬಿಮ್ಸ್ ಸಂಸ್ಥೆಯ ಗಣಪತಿ ಉತ್ಸವದ ಸಾಂಸಕೃತಿಕ ಕಾರ್ಯಕ್ರಮದಲ್ಲಿ, ಶಾರೀರಕವಾಗಿ ಎಲ್ಲ ಅವಯವಗಳೊಂದಿಗೆ ಸದೃಢವಾಗಿರುವ ಗೆಳತಿಯೊಂದಿಗೆ ಭರತ ನಾಟ್ಯವನ್ನು ಸರಿಸಮಾನಾಗಿ ಮಾಡಿ ಇಡೀ ಸಂಸ್ಥೆಯ ಎಲ್ಲ ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಕೇವಲ ಒಂದು ಕಾಲಿನಿಂದ ಹಾಗೂ ಒಂದು ಕೈಯಿಂದ ಯಾರಿಗೂ ಕಡಿಮೆ ಇಲ್ಲದಂತೆ ನಮ್ಮ ನಾಡಿನ ಹೆಮ್ಮೆಯ ನಾಟ್ಯವನ್ನು ಮಾಡಿ ತನ್ನ ಕಲೆಯನ್ನು ಇಡೀ ಬಿಮ್ಸ್ ಸಂಸ್ಥೆಗೆ ಪ್ರದರ್ಶಿಸಿ ಎಲ್ಲ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಳು.
ಈ ವಿಶೇಷಚೇತನ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಈಜು ಕ್ರೀಡೆಯಲ್ಲಿ ಅದ್ಭುತ ಸಾಧಕಿಯಾಗಿದ್ದಾಳೆ. ಈ ಸಾಧನೆ ಬಿಮ್ಸ್ ಸಂಸ್ಥೆಗೆ ಮತ್ತೊಂದು ಗರಿ ಮೂಡಿಸಿದೆ. ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನ ಮೂರು ವಿಭಾಗಗಳಲ್ಲಿ ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಪಡೆದ ಬಿಮ್ಸ್ ಸಂಸ್ಥೆಯ ಹೆಮ್ಮೆಯ ಚಿನ್ನದ ಹುಡುಗಿ. ಇತ್ತೀಚಿಗೆ ಗೋವಾದಲ್ಲಿ ಜರುಗಿದ ರಾಷ್ಟç ಮಟ್ಟದ ಭಾರತದ ಪ್ಯಾರಾ ಓಲಂಪಿಕ್ ಈಜು ಸ್ಪರ್ಧೆಯಲ್ಲಿ ಒಂದು ಚಿನ್ನದ ಪದಕ ಹಾಗೂ ಎರಡು ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಒಟ್ಟು ಮೂರು ವಿಭಾಗಗಳಲ್ಲಿ ಭಾಗವಹಿಸಿ ಮೂರೂ ವಿಭಾಗಗಳಲ್ಲಿ ಪದಕಗಳನ್ನು ಪಡೆದ ಹೆಮ್ಮೆ ಇವಳದು.
ತಂದೆ ಖಾಸಗಿಯಾಗಿ ಕೆಲಸ ಮಾಡುತ್ತಾರೆ. ತಾಯಿ ಶಿಕ್ಷಕರು. ಇಬ್ಬರೂ ಈ ಮಗುವಿನ ಸಾಧನೆಯನ್ನು ನೋಡಿ ಭಾವುಕರಾಗುತ್ತಾರೆ. ಅವಳು ಜನ್ಮಜಾತ ಅಂಗವಿಕಲೆಯಾಗಿರಬಹುದು. ಆದರೆ ನಮ್ಮ ಮನೆಯ ಮಾಣಿಕ್ಯವೆಂದು ಮಗಳ ಸಾಧನೆಯನ್ನು ಕಂಡು ತಂದೆ ತಾಯಿ ಪುಳಕಿತರಾಗುತ್ತಾರೆ. ಮಗಳು ಅಂಗವಿಕಲೆಯಾಗಿ ಹುಟ್ಟಿದಳು ಎಂಬ ದುಃಖವಿಲ್ಲ; ಬದಲಾಗಿ ಅವಳ ಕಾರ್ಯವೈಖರಿ ನೋಡಿ ನಮಗೆ ಹೆಮ್ಮೆಯುಂಟಾಗುತ್ತದೆ ಎಂದು ಮಗಳ ಕುರಿತು ಮೆಚ್ಚುಗೆಯ ಮಾತುಗಳನ್ನು ಹೇಳುತ್ತಾರೆ.
ಅವಳ ಈ ಅದ್ಭುತ ಸಾಧನೆ ಬಿಮ್ಸ್ ಸಂಸ್ಥೆಗೆ ಹೆಮ್ಮೆ ತಂದಿದೆ. ಎಲ್ಲ ವಿದ್ಯಾರ್ಥಿನಿಯರಿಗೆ ಪಂಕಜಾ ಮಾದರಿಯಾಗಿದ್ದಾಳೆ. ಅವಳನ್ನು ನೋಡಿ ಉಳಿದ ವಿದ್ಯಾರ್ಥಿನಿಯರು ಕಲಿಯುವುದು ಬಹಳಷ್ಟಿದೆ ಎಂದು ಬಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಹೇಳಿ ಅಭಿನಂದಿಸಿದರು. ಅವಳ ಈ ಸಾಧನೆಗೆ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಗಳು, ಸಹಪಾಠಿಗಳು ಹರ್ಷವನ್ನು ವ್ಯಕ್ತಪಡಿಸಿದರು.

error: Content is protected !!