ಬೆಳಗಾವಿ-೩೦: ಬೆಳಗಾವಿಯಿಂದ ಕಾರ್ಗೋ ಸೇವೆ ಒದಗಿಸುವ ಹಾಗೂ ಪ್ರಯಾಣಿಕರ ವಿಮಾನ ಸೌಲಭ್ಯವನ್ನು ವಿಸ್ತರಿಸುವ ಸಂಬಂಧ ಇಲ್ಲಿಯ ಫೋರಮ್ ಆಫ್ ಅಸೋಸಿಯೇಶನ್ಸ್ ಆಫ್ ಬೆಳಗಾವಿ (ಎಫ್ ಒಎಬಿ) ಪದಾಧಿಕಾರಿಗಳ ಜೊತೆಗೆ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್ ಅವರು ಸುದೀರ್ಘ ಚರ್ಚೆ ನಡೆಸಿದರು.
ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಸುಮಾರು 2 ಗಂಟೆಗಳ ಕಾಲ ವಿಮಾನ ಯಾನ ಸೌಲಭ್ಯದ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಬೆಳಗಾವಿಯಿಂದ ಕೃಷಿ ಮತ್ತು ಕೈಗಾರಿಕೆ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ದೇಶದ ವಿವಿಧೆಡೆ ಮತ್ತು ವಿದೇಶಗಳಿಗೆ ಕೂಡ ರಫ್ತಾಗುತ್ತಿದ್ದು, ಕಾರ್ಗೋ ಸೇವೆ ಅತ್ಯವಶ್ಯವಾಗಿದೆ. ಈ ಕುರಿತು ತುರ್ತು ಕ್ರಮ ಅಗತ್ಯವಾಗಿದೆ. ಜೊತೆಗೆ ಇಲ್ಲಿಂದ ಇನ್ನಷ್ಟು ನಗರಗಳಿಗೆ ಸಂಪರ್ಕ ಅಗತ್ಯವಾಗಿದೆ. ಆದರೆ ದುರದೃಷ್ಟವಶಾತ್ ಇರುವ ವಿಮಾನ ಸೇವೆಗಳು ಪ್ರಯಾಣ ದಟ್ಟಣೆ ಇದ್ದಾಗ್ಯೂ ರದ್ದಾಗುತ್ತಿವೆ ಎಂದು ಎಫ್ಒಎಬಿ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯಿಂದ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ತಿರುಪತಿ ಸೇರಿದಂತೆ ಹಲವು ನಗರಗಳಿಗೆ ಸಂಪರ್ಕಿಸುವ ವಿಮಾನಗಳು ಶೇ.85ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿವೆ. ಆದರೆ ವಿನಾಕಾರಣ ಕೆಲವು ವಿಮಾನವನ್ನು ರದ್ದು ಮಾಡಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಕೈಗಾರಿಕೆ, ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಹಾಗಾಗಿ ಇದನ್ನು ತಡೆಯಬೇಕು. ಇನ್ನಷ್ಟು ನಗರಗಳಿಗೆ ವಿಮಾನ ಸೇವೆ ವಿಸ್ತರಿಸುವ ಸಂಬಂಧ ಕ್ರಮ ತೆಗೆದುಕೊಳ್ಳಬೇಕು. ಅಂತಾರಾಷ್ಟ್ರೀಯ ದರ್ಜೆಗೆ ವಿಮಾನ ನಿಲ್ದಾಣವನ್ನು ಏರಿಸಿ ವಿದೇಶಗಳಿಗೂ ವಿಮಾನ ಸೌಲಭ್ಯ ವಿಸ್ತರಿಸಬೇಕು ಎಂದು ಕೋರಿದರು.
ಏರ್ ಕಾರ್ಗೋ ಸೇವೆಯಿಂದ ಕೃಷಿ ಹಾಗೂ ಕೈಗಾರಿಕೆ ಬೆಳವಣಿಗೆಗೆ ಸಹಾಯವಾಗಲಿದೆ. ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಇದಾದರೆ ಈ ಭಾಗದ ಆರ್ಥಿಕ ಬೆಳವಣಿಗೆಗೂ ಅನುಕೂಲವಾಗಲಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ದೊಡ್ಡ ವಿಮಾನಗಳ ಸೇವೆ ಅಗತ್ಯವಾಗಿದೆ. ಕೃಷಿ ಉತ್ಪನ್ನಗಳ ಸಂಗ್ರಹಕ್ಕೂ ಕ್ರಮವಾಗಬೇಕು. ವಿಮಾನ ನಿಲ್ದಾಣಕ್ಕೆ ಅಗತ್ಯವಾಗಿರುವ ಭೂ ಸ್ವಾಧೀನ, ವಿಮಾನ ನಿಲ್ದಾಣ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.
ಎಲ್ಲದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ ತ್ಯಾಗರಾಜನ್, ಬೆಳಗಾವಿಯ ಬೇಡಿಕೆಗೆ ತಕ್ಕಂತೆ ವಿಮಾನ ಸೇವೆ ಒದಗಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ಸ್ಥಳೀಯ ಸಚಿವರು, ಸಂಸದರು, ವಿಮಾನಯಾನ ಸಂಸ್ಥೆ ಅಧಿಕಾರಿಗಳು ಮತ್ತು ಮೇಲಧಿಕಾರಿಗಳ ಜೊತೆಗೂ ಚರ್ಚಿಸಲಾಗುವುದು. ಆದಷ್ಟು ಬೇಗ ವಿಮಾನ ನಿಲ್ದಾಣ ಸೇವೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನೀಡಿದರು.
ಎಫ್ಒಎಬಿಯ ಚೈತನ್ಯ ಕುಲಕರ್ಣಿ, ರಾಮ ಭಂಡಾರೆ, ಸಚಿನ್ ಸಬ್ನಿಸ್, ವಿನಾಯಕ ಲೋಕೂರ್, ಎಂ.ಕೆ.ಹೆಗಡೆ, ರೋಹನ್ ಜುವಳಿ, ಸತೀಶ್ ಕುಲಕರ್ಣಿ, ಹುಂಬರವಾಡಿ, ರಾಜೇಂದ್ರ ಮುಂದಡ, ಅಮಿತ್ ಕಾಲಕುಂದ್ರಿ, ಮಹೇಶ ಬಿರಂಗಿ, ಸ್ವಪ್ನಿಲ್ ಶಹಾ, ಪಂಡಿತ್ ಮೊದಲಾದವರು ಇದ್ದರು.
ವಿಮಾನ ನಿಲ್ದಾಣದ ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ.ಎಸ್. ದೇಸಾಯಿ, ಇಂಡಿಗೋ ಸಂಸ್ಥೆಯ ಪ್ರತಿನಿಧಿಗಳು ಸಹ ಪಾಲ್ಗೊಂಡಿದ್ದರು.