23/12/2024
IMG-20241024-WA0080

ಬೆಳಗಾವಿ-೨೪: ಆಧುನಿಕ ಸಮಾಜದಲ್ಲಿ ಕೂಡ ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆ ತನ್ನ ಮೆರಗು, ಅಂದ, ಚೆಂದ , ಕಲಾತ್ಮಕತೆಯನ್ನು ಉಳಿಸಿಕೊಂಡು ಬಂದಿದೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮುಖ್ಯ ಅತಿಥಿ ಸುನೀತಾ ಪವಾರ ಹೇಳಿದರು.

ಇಲ್ಲಿನ ಶಿವಬಸವ ಲಿಂಗಾಯತ ಸಭಾಭವನದಲ್ಲಿ ಬುಧವಾರ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಿದ್ದ ” ನಾರಿ ನಿನಗೆ ಸೀರೆಯ ಚೆಂದ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ನಾರಿ ಅಂದಾಕ್ಷಣ, ನೆನಪಿಗೆ ಬರುವವಳೇ ಸೀರೆಯುಟ್ಟ ನಾರಿ. ನಮ್ಮ ದೇಶೀಯ ಸಂಸ್ಕೃತಿಯ ಜೀವಾಳವೇ ಸೀರೆ. ನೀರೆಯ ಅಂದದ ಉಡುಪಾದ ಸೀರೆಗೆ ಅದರದ್ದೇ ಆದ ಗೌರವಗಳಿವೆ. ಅಂದಗಾತಿಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸೀರೆಗೆ ಮತ್ತು ಸೀರೆಯುಡುವ ಶೈಲಿಗೆ ವಿದೇಶಿಯರೂ ಮನಸೋತಿದ್ದಾರೆ ಎಂದು ಹೇಳಿದರು.

ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೇ ಸುನೀತಾ ಪಾಟೀಲ ಅವರು ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿಯೇ ಅತ್ಯಂತ ಪುರಾತನ ಉಡುಗೆ ಸೀರೆ. ಅನಾದಿ ಕಾಲದಿಂದ ಸೀರೆಯು ನಮ್ಮ ದೇಶದ ಮಹಿಳೆಯರ ಪ್ರಮುಖ ಉಡುಗೆಯಾಗಿದೆ. ಸೀರೆ, ಭಾರತೀಯ ಸಂಸ್ಕೃತಿಯ ಪ್ರತೀಕಗಳಲ್ಲಿ ಒಂದಾಗಿ ಪರಿಗಣಿತವಾಗಿದೆ. ನಮ್ಮ ದೇಶದ ಸೀರೆಗೆ ತಾಯಿಯ ಸ್ಥಾನವಿದೆ, ಅಷ್ಟೇ ಮಮತೆಯ ಭಾವನೆಯಿರುವ ಸೀರೆ ಭಾರತ ಮಾತೆಯ ಹೆಮ್ಮೆಯ ಉಡುಪು. ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು, ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಮೀಟಿ ಮಹಿಳೆಯರಾದ ಪೂಜಾ ಬಡದಾಳೆ, ಪ್ರತಿಭಾ ಗುತ್ತಿಗೋಳಿ, ಸುಧಾ ಪಡೆನ್ನವರ, ಸೀಮಾ ಖೋತ, ರಶ್ಮಿ ವಿಜಾಪುರ, ಲತಾ ಮಾನೆ, ಮತ್ತು ಸುರೇಖಾ ದೇಸಾಯಿ ಅವರು ಕಸೂತಿ ಸೀರೆ ಉಡುಪು ತೊಟ್ಟು ರ‍್ಯಾಂಪ್‌ ವಾಕ್‌ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಾರದಾ ಪಾಟೀಲ ನಿರೂಪಿಸಿದರು. ಸಹ ಕಾರ್ಯದರ್ಶಿ ವಿದ್ಯಾ ಗೌಡರ ವಂದಿಸಿದರು. ಲಿಂಗಾಯತ ಮಹಿಳಾ ಸಮಾಜದ ಮಹಿಳೆಯರು ಇನ್ನೀತರು ಹಾಜರಿದ್ದರು.

error: Content is protected !!