23/12/2024
IMG-20241021-WA0004

ಬೆಳಗಾವಿ-೨೧:ಭಾನುವಾರ ನಡೆದ’ಕಿತ್ತೂರ ನಾಡು’ ಈಗ ಸಂಭ್ರಮದ ಹೊನಲಿನಲ್ಲಿದೆ. ಉತ್ಸವದ ದ್ವಿಶತಮಾನೋತ್ಸವ ಆಚರಣೆಗಾಗಿ ‘ಕ್ರಾಂತಿಯ ನೆಲ’ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಇದರ ಪ್ರಯುಕ್ತ ಕಿತ್ತೂರಿನಲ್ಲಿ ಇದೇ ಮೊದಲ ಬಾರಿ ನಡೆದ ಮಹಿಳೆಯರ ಬೈಕ್‌ ರ್‍ಯಾಲಿ ಕಣ್ಮನಸೆಳೆಯಿತು. ಮನೆಯಿಂದ ಹೊರಬಂದು ಉತ್ಸಾಹದಿಂದ ಬೈಕ್‌ ಏರಿದ ನಾರಿಯರು, ರಣೋತ್ಸಾಹದ ಕಹಳೆ ಓದಿದರು.

ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನವು ದಿಗ್ವಿಜಯ ಸಾಧಿಸಿದ ಘಳಿಗೆಗೆ ಈಗ 200 ವಸಂತ ತುಂಬಿದೆ. ಇದರ ಸವಿನೆನಪಿಗಾಗಿ ಅ.23ರಿಂದ 25ರವರೆಗೆ ಮೂರು ದಿನ ವೈಭವದಿಂದ ನೆರವೇರುತ್ತಿರುವ ಉತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಬೈಕ್ ರ್‍ಯಾಲಿ ನಡೆಯಿತು.

ಬಗೆಬಗೆಯ ವಿನ್ಯಾಸಗಳ ಸೀರೆ ತೊಟ್ಟು, ತಲೆಗೆ ಕೇಸರಿ ಪೇಟಾ ಸುತ್ತಿಕೊಂಡು ಧೈರ್ಯದ ಖಣಿಗಳಂತೆ ರಸ್ತೆಗಿಳಿದಿದ್ದ ನಾರಿಯರು, ಹುಮ್ಮಸ್ಸಿನಿಂದ ರಸ್ತೆಯ ಬೀದಿ ಬೀದಿಗಳಲ್ಲಿ ಬೈಕ್‌ಗಳನ್ನು ಓಡಿಸಿದರು. ಕೆಲವರು ಬುಲೆಟ್‌ ಸವಾರಿಯನ್ನೂ ಮಾಡಿ ಗಮನಸೆಳೆದರು. ಚನ್ನಮ್ಮನ ಇತಿಹಾಸವನ್ನೂ ನಾಡಿನ ಜನತೆಗೆ ಪರಿಚಯಿಸಿದರು.

ತಾಲ್ಲೂಕಿನ ಹೂಲಿಕಟ್ಟಿ  ಅಬ್ದುಲ್ ಕಲಾಮ ಆಜಾದ ವಸತಿ ಶಾಲೆಯಿಂದ ಆರಂಭಗೊಂಡ ಬೈಕ್ ರ್‍ಯಾಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ, ಕಿತ್ತೂರು ಕೋಟೆ ಆವರಣ ಪ್ರವೇಶಿಸಿತು.

ಚನ್ನಮ್ಮನ ಪರ ಜೈಕಾರ ಕೂಗುತ್ತಾ ಬೈಕ್ ಓಡಿಸುತ್ತಿದ್ದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿತು. ಅಷ್ಟೇ ಅಲ್ಲದೇ ಉತ್ಸವಕ್ಕೆ ಮತ್ತಷ್ಟು ಹುರುಪು-ಹುಮ್ಮಸ್ಸು ತಂದು ಕೊಟ್ಟಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ರ್ಯಾಲಿಯನ್ನು ರಸ್ತೆಗುಂಟ ನಿಂತು ಜನ ಕಣ್ತುಂಬಿಕೊಂಡರು.

ಪ್ರವಾಸೋದ್ಯಮ ಇಲಾಖೆ ಜಂಟಿನಿರ್ದೇಶಕಿ ಸೌಮ್ಯಾ ಬಾಪಟ್‌, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಸೇರಿ ನೂರಾರು ಮಹಿಳೆಯರು ಬೈಕ್ ರ್ಯಾಲಿಯಲ್ಲಿ ಉಪಸ್ಥಿತಿರಿದ್ದರು.

error: Content is protected !!