23/12/2024
IMG-20241021-WA0014

ಬೆಳಗಾವಿ-೨೧:ಸೋಮವಾರ ಬೆಳಗಾವಿ ನಗರದ ಹಿಂಡಲಗಾ ರಸ್ತೆಯ ವಿನಾಯಕ ನಗರದಲ್ಲಿ ಹದಗೆಟ್ಟ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಸೋಮವಾರ ರಸ್ತೆಯ ಗುಂಡಿಗಳಲ್ಲಿ ತೆಂಗಿನ ಹಾಗೂ ಬಾಳೆ ಸಸಿ ನೆಟ್ಟು ವಿನೂತನ ಪ್ರತಿಭಟನೆ ನಡೆಸಿದರು.

ಹಿಂಡಲಗಾ ರಸ್ತೆಗೆ ಹೋಗುವ ವಿನಾಯಕ ನಗರದಲ್ಲಿನ ರಸ್ತೆಯಲ್ಲಿನ ಬಿದ್ದ ಹೊಂಡಗಳಲ್ಲಿ ಅಲ್ಲಿನ ನಿವಾಸಿಗಳು ಸಸಿ ನೆಟ್ಟು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದರೂ ಜಿಲ್ಲಾಡಳಿತ ಹಾಗೂ ಪಾಲಿಕೆ ಕಣ್ಣುಮುಚ್ಚಿ ಕುಳಿತಿದೆ. ಇಲ್ಲಿನ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಭಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಸ್ತೆ ದುರಸ್ತಿಗಾಗಿಅನುದಾನ ಬಿಡುಗಡೆಯಾದರೂ ರಸ್ತೆಗಳು ದುರಸ್ತಿ ಕಾಣುತ್ತಿಲ್ಲ. ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಬಿಸಿಲಿನಲ್ಲಿ ಈ ರಸ್ತೆಗಳಿಂದ ಇಡೀ ನಗರ ದೂಳುಮಯವಾಗಿ ಪರಿಣಮಿಸಿದೆ. ಮಳೆಗಾಲದಲ್ಲಂತೂ ಜನರು ಅನೇಕ ರೋಗ–ರುಜಿನಗಳಿಗೆ ತುತ್ತಾಗುವಂತಾಗಿದೆ ಎಂದು ವಿನಾಯಕ ನಗರದ ನಿವಾಸಿಗಳು ದೂರಿದರು.
ಹದಗೆಟ್ಟ ರಸ್ತೆಗಳಲ್ಲಿ ಓಡಾಡುವ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ವಿನಾಯಕ ನಗರದಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಕೂಡಲೇ ಮುಂದಾಗಬೇಕು ಇಲ್ಲದಿದ್ದಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆಯಲಿವೆ ಎಚ್ಚರಿಸಿದ್ದಾರೆ.

error: Content is protected !!