ಬೆಳಗಾವಿ-೨೧: ಸಂಸ್ಥಾನ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮಾಜಿಯ ಉತ್ಸವಕ್ಕೆ ಇದೀಗ ಎಲ್ಲಡೆ ಹಬ್ಬದ ಸಡಗರ ಮನೆ ಮಾಡಿದೆ.ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಐತಿಹಾಸಿಕ ನಾಡಾದ ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವದ ಹಿನ್ನೆಲೆಯಲ್ಲಿ ಕಿತ್ತೂರಿನ ಕೋಟೆಯ ಆವರಣದಲ್ಲಿ ಅ.23, 24 ಮತ್ತು 25ರಂದು ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಯ ವಿವಿಧ ಊರಗಳಿಂದ ಬೀಗರ ದಂಡೇ ಕಿತ್ತೂರಿನ ಗ್ರಾಮದ ಮನೆಗಳಿಗೆ ಹರಿದು ಬರುತ್ತಿದ್ದು, ತಮ್ಮ ತಮ್ಮ ಮನೆಗಳ ಸಿಂಗಾರಗೊಳಿಸುವ ಮೂಲಕ ಉತ್ಸವ ಹಾಗೂ ದೀಪಾವಳಿ ಹಬ್ಬದ ಸಿದ್ಧತೆಯಲ್ಲಿ ಬಿಜಿಯಾಗಿದ್ದಾರೆ. ಹಬ್ಬದಲ್ಲೊಂದು ಹಬ್ಬದಂತೆ ಕಿತ್ತೂರು ಉತ್ಸವಕ್ಕೆ ಈ ಬಾರಿ ವಿಶೇಷ ಕಳೆ ಕಟ್ಟಿದೆ.
ಈ ಬಾರಿ 5 ಕೋಟಿ ಬಿಡುಗಡೆ: ಕಿತ್ತೂರು ಉತ್ಸವಕ್ಕೆ ಈ ವರ್ಷ 200 ವರ್ಷ,ಸರ್ಕಾರ ಈ ಉತ್ಸವದ ಅದ್ಧೂರಿ ಆಚರಣೆಗೆ ಐದು ಕೋಟಿ ಬಿಡುಗಡೆ ಮಾಡಿದ್ದು ಉತ್ಸವ ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪೂರ್ವಭಾವಿ ಸಭೆ ನಡೆಸಿ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಭರದ ಸಿದ್ದತೆ: ಉತ್ಸವ ಆದ ನಂತರ ದೀಪಾವಳಿ ಹಬ್ಬ ಬಂದಿರುವುದರಿಂದ ಕಿತ್ತೂರಿನ ಜನತೆ ಈ ಎರಡು ಕಾರ್ಯಕ್ರಮಗಳಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮಾಜಿ ಉತ್ಸವ ಅ.23, 24 ಹಾಗೂ 25 ರಂದು ನಡೆಯಲಿದೆ. ಮೆರವಣಿಗೆ ಸ್ವಾಗತಕ್ಕಾಗಿ ಸಕಲ ವಾದ್ಯ, ವೃಂದ, ತಳಿರು ತೋರಣಗಳು, ಸ್ವಾಗತ ಕಮಾನುಗಳು ಹಾಗೂ ರಂಗೋಲಿಗಳಿಂದ ಇಡಿ ಕಿತ್ತೂರು ನವ ವಧುವಿನಂತೆ ಶೃಂಗಾರಗೊಳ್ಳಲಿದೆ.
ಜನಾಕರ್ಷಣೆಗೊಳ್ಳಲಿರುವ ಕಲಾತಂಡಗಳು: ಉತ್ಸವ ಮೆರವಣೆಗೆಯಲ್ಲಿ 50 ಕಲಾತಂಡಗಳು, ಆನೆ ಸೇರಿದಂತೆ 501 ಪೂರ್ಣಕುಂಭ ಹೊತ್ತ ಮಹಿಳೆಯರು, ಚನ್ನಮ್ಮಾಜಿ ಹಾಗೂ ರಾಯಣ್ಣ ವೇಷಧಾರಿ ವಿದ್ಯಾರ್ಥಿಗಳು ಮೆರವಣೆಗೆಯಲ್ಲಿ ಶೋಭೆ ತಂದು ದರ್ಬಾರದ ಗತಕಾಲದ ವೈಭವನ್ನು ಸಾರಿ ಹೇಳುವಂತೆ ಮಾಡಲಿದ್ದಾರೆ.
ಉತ್ಸವ ಅದ್ಧೂರಿಗೆ ಸಚಿವರ ಭರವಸೆ: ಉತ್ಸವದಲ್ಲಿ ರಾಷ್ಟ್ರ ಮಟ್ಟದ ಕಲಾವಿದರನ್ನು ಕರೆತಂದು ಈ ವರ್ಷವೂ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಇದರ ಜತೆ ಸ್ಥಳೀಯ ಕಲಾವಿದರಿಗೂ ಪ್ರಥಮಾದ್ಯತೆ ನೀಡಿ, ಉತ್ಸವದಲ್ಲಿ ಸಾಹಿತಿಗಳು, ಕವಿಗಳು, ವಿದ್ವಾಂಸರನ್ನು ಸಹ ಆಹ್ವಾನಿಸಲಾಗುವುದು. ಮುಖ್ಯವಾಗಿ ಕಿತ್ತೂರಿನಲ್ಲಿ ರಾಷ್ಟ್ರ ಮಟ್ಟದ ಪೈಲ್ವಾನರಿಂದ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗುವುದು. ಈ ಬಾರಿ ಕಿತ್ತೂರು ಉತ್ಸ ವ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಿದ್ಧಗೊಂಡಿರುವ ಅಂಗಡಿಗಳು: 3 ದಿನ ನಡೆಯಲಿರುವ ಕಿತ್ತೂರು ಉತ್ಸವಕ್ಕೆ ಜನ ಸಾಗರ ಹರಿದು ಬರುವ ನಿರೀಕ್ಷೆ ಇರುವುದರಿಂದ ಹೋಟೆಲ್ಗಳು, ಐಸ್ಕ್ರೀಮ್ ಅಂಗಡಿಗಳು, ಕಿರಾಣಿ ಅಂಗಡಿಗಳ ಮಾಲೀಕರು ಸಾಕಷ್ಟು ರೀತಿಯ ತಿಂಡಿ ತಿನುಸುಗಳ ಪದಾರ್ಥಗಳನ್ನು ಅಂಗಡಿಗಳಲ್ಲಿ ತಂದಿರಿಸಿ ತಮ್ಮ ಗಲ್ಲಾ ಪಟ್ಟಿಗೆ ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಒಟ್ಟಿನಲ್ಲಿ ದೀಪಾವಳಿಯ ಝಗಮಗದ ಮಧ್ಯೆಯೇ ಚನ್ನಮ್ಮನ ಇತಿಹಾಸಕ್ಕೆ ಹೊಳಪು ನೀಡುವ ಕಿತ್ತೂರು ಉತ್ಸವದ ಸಿದ್ಧತೆಗಳು ಫೈನಲ್ ಟಚ್ ಪಡೆಯುತ್ತಿವೆ. ಸಂಪೂರ್ಣ ಅಧಿಕಾರಿ ವರ್ಗ ಇತ್ತ ಕೇಂದ್ರೀಕೃತವಾಗಿದ್ದರೆ ನಿತ್ಯ ಕೆಲಸಗಾರರು ವೇದಿಕೆ ನಿರ್ಮಾಣ, ಸ್ವಚ್ಛತೆ, ಶೃಂಗಾರ ಹೀಗೆ ಕಿತ್ತೂರನ್ನು ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ. ಕಲೆ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಪ್ರಕಾರಗಳ ಸಮುಚ್ಛಯದ ಉತ್ಸವಕ್ಕೆ ಕಿತ್ತೂರು ಮತ್ತೊಮ್ಮೆ ಬೆಳಗುತ್ತಿದೆ.
ಪೊಲೀಸ್ ಬಂದೋಬಸ್ತ್: ಕಿತ್ತೂರು ಉತ್ಸವದಲ್ಲಿ ಜನಸಾಗರ ಹರಿದು ಬರಲಿದ್ದು, ಉತ್ಸವ ನಿಮಿತ್ತ ಜನರ ಹಿತದೃಷ್ಟಿಯಿಂದ 3 ದಿನ ಉತ್ಸವದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಬಾರಿ ಪೊಲೀಸ್ ಬಂದೋಬಸ್ತ ಮಾಡಲಾಗುವದು. ಉತ್ಸವದ ಮೆರವಣಿಗೆಯಲ್ಲಿ ಮದ್ಯ ಸೇವಿಸಿ ಭಾಗವಹಿಸದಂತೆ ಕಟ್ಟೆಚ್ಚರ ನೀಡಲಾಗಿದೆ. ಮದ್ಯ ಸೇವಿಸಿದ ವ್ಯಕ್ತಿ ಮೇಲೆ ಅನುಮಾನ ಬಂದರೆ ಅಂಥವರನ್ನು ಕೂಡಾ ಇಲ್ಲಿ ತಪಾಸಣೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.