23/12/2024
IMG-20241002-WA0003

ಗಾಂಧೀಜಿ ಜೀವನ ಚರಿತ್ರೆ ಸ್ಫೂರ್ತಿ: ಶಾಸಕ ಆಸೀಫ್(ರಾಜು) ಸೇಠ್

ಬೆಳಗಾವಿ-೦೨: ಮಹಾತ್ಮಾ ಗಾಂಧೀಜಿ ಅವರು ಸ್ವರಾಜ್ಯ ನೀತಿ, ಅಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಗಾಂಧೀಜಿ ಅವರ ಜೀವನವೇ ಒಂದು ಸಂದೇಶವಾಗಿದ್ದು, ಅವರ ಜೀವನ ಚರಿತ್ರೆಯನ್ನು ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ಅವರಿಂದ ಸ್ಫೂರ್ತಿ ಪಡೆದುಕೊಂಡು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮಹಾನಗರ ಪಾಲಿಕೆ, ಬೆಳಗಾವಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ವೀರಸೌಧದಲ್ಲಿ ಬುಧವಾರ  ಜರುಗಿದ ಮಹಾತ್ಮಾ ಗಾಂಧೀಜಿ 155ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಭಾರತ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದುಕೊಂಡ ದಿನದಿಂದಲೂ ಸಹ ನಿರಂತರವಾಗಿ ಪ್ರತಿವರ್ಷ ನೆನೆದುಕೊಳ್ಳುವ ವ್ಯಕ್ತಿ ಎಂದರೆ ಅದುವೇ ರಾಷ್ಟ್ರಪಿತ ಮಹಾತ್ಮ ಗಾಂಧಿ. ಭಾರತೀಯ ಪ್ರಜೆಗಳು ಅದರಲ್ಲೂ ವಿದ್ಯಾರ್ಥಿಗಳು ಗಾಂಧಿ ತಾತ ಎಂದೇ ಪ್ರೀತಿ ಪಾತ್ರರಾದ ಗಾಂಧೀಜಿಯವರ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

1924 ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿತ್ತು. ಮಹಾತ್ಮಾ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಅಧೀವೇಶನದಲ್ಲಿ ದೇಶದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪಾಲ್ಗೊಂಡಿದ್ದಂತಹ ಪುಣ್ಯ ಭೂಮಿ ನಮ್ಮ ಬೆಳಗಾವಿಯಾಗಿದೆ.

ಅಹಿಂಸಾ ಪರಮೋಧರ್ಮ. ಸತ್ಯ, ಶಾಂತಿ ಮತ್ತು ಸ್ವಚ್ಛತೆಯ ಪರಿಕಲ್ಪನೆ ನೀಡಿದ ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಬೇಕೆಂದು ತಿಳಿಸಿದರು.

ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದ ಗಾಂಧೀಜಿ ಅವರು, ಸಾರ್ವಜನಿಕ ಸ್ವಚ್ಛತೆಯ ಮಹತ್ವವನ್ನು ಸಾರಿದರು. ಅವರ ಜನ್ಮದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಯುವಜನತೆ ಸ್ವಚ್ಛತೆಯೇ ಸೇವೆ ಅಭಿಯಾನ ಆರಂಭಿಸುವದರ ಜೊತೆಗೆ ಇತರರಿಗೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಲು ಶಾಸಕರಾದ ಆಸೀಫ್(ರಾಜು) ಸೇಠ್ ಕರೆ ನೀಡಿದರು.

ಮಹಾಪೌರರಾದ ಸವಿತಾ ಕಾಂಬಳೆ ಅವರು ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಬಂದು ಹೋದಂತಹ ಸ್ಥಳದಲ್ಲಿ ನಾವು ಅವರ ಜಯಂತಿ ಕಾರ್ಯಕ್ರಮ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ಇಂದಿನ ಯುವ ಜನತೆ ಅನುಸರಿಸುವ ಮೂಲಕ ಗಾಂಧೀಜಿ ಕಂಡಂತಹ ರಾಮರಾಜ್ಯದ ಕನಸು ನನಸಾಗಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಶಿರೀಷ್ ಜೋಶಿ ಅವರು, ಮಹಾತ್ಮಾ ಗಾಂಧೀಜಿಯವರು ತಮ್ಮ ಇಡೀ ಜೀವಿತಾ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿಯಲ್ಲಿ 10 ದಿನಗಳಕಾಲ ಕಾಂಗ್ರೆಸ್ ಅಧಿವೇಶನ ಬಹಳ ಅದ್ದೂರಿಯಾಗಿ ನಡೆದಿತ್ತು ಎಂದು ತಿಳಿಸಿದರು.

“ದೇವರು ಎಂದರೆ ಸತ್ಯ-ಬೆಳಕು ಎಂದು ಅವರು ತಮ್ಮ ಮಾತಿನ ಮೂಲಕ ಜಾಗೃತಿ ಮೂಡಿಸಿದರು. ಅಸ್ಪ್ರಶ್ಯತೆ ನಿವಾರಣೆಗೆ ನಿರಂತರ ಶ್ರಮಿಸಿದವರು ಮಹಾತ್ಮಾ ಗಾಂಧೀಜಿ. 1934 ರಲ್ಲಿ ಮತ್ತೆ ಗಾಂಧೀಜಿಯವರು ಬೆಳಗಾವಿಗೆ ಆಗಮಿಸಿ 3 ದಿನಗಳ ಕಾಲ ಬೆಳಗಾವಿಯಲ್ಲಿ ನೆಲೆಸಿ ಸಮಾನತೆಯ ಸಂದೇಶವನ್ನು ಸಾರಿದರು.

ಒಟ್ಟಾರೆ ಮೂರು ಬಾರಿ ಬೆಳಗಾವಿಗೆ ಭೇಟಿ ನೀಡಿದ ಮಹಾತ್ಮಾ ಗಾಂಧೀಜಿಯವರ ಜತೆ ಬೆಳಗಾವಿಗೆ ಅವಿನಾಭಾವ ಸಂಬಂಧವಿದೆ. ಅವರು ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನ ಜರುಗಿ ನೂರು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಶಿರೀಷ್ ಜೋಶಿ ಮನವಿ ಮಾಡಿಕೊಂಡರು.

ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೇಸ್ ಅಧಿವೇಶನದಲ್ಲಿ ಅಂಗೀಕರಿಸಲಾದ ನಿರ್ಣಯಗಳು; ಮಹಾತ್ಮಾ ಗಾಂಧೀಜಿಯವರ ಭಾಷಣ; ಊಟೋಪಚಾರದ ವ್ಯವಸ್ಥೆ ಮತ್ತು ಇಡೀ ಅಧಿವೇಶನದ ಖರ್ಚು-ವೆಚ್ಚಗಳ ಕುರಿತು ಶಿರೀಷ್ ಜೋಶಿ ಅವರು ವಿವರಿಸಿದರು.

ಪ್ರತಿಜ್ಞಾ ವಿಧಿ ಸ್ವೀಕಾರ:

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ.ಭೀಮಾಶಂಕರ ಗುಳೇದ ಅವರು ಬೆಳಗಾವಿಯನ್ನು ಸ್ವಚ್ಚವಾಗಿರಿಸುವ ಮತ್ತು ಹಸಿರೀಕರಣಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಬೆಳಗಾವಿಯನ್ನು ಸ್ವಚ್ಚ ಮತ್ತು ಹಸಿರು ನಗರವನ್ನಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸ್ವಚ್ಛತೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ:

ಮಹಾತ್ಮಾ ಗಾಂಧೀಜಿ ಅವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗದಲ್ಲಿ ಕು.ದಿವ್ಯಾ ಶ್ರೀಶೈಲ ಗಾಣಿಗೇರ ಪ್ರಥಮ, ಕು. ಗಾಯತ್ರಿ ಮ ಮಲ್ಲಾಡಿ ದ್ವೀತಿಯ, ಕು. ಅಪೂರ್ವ ಉಮೇಶ ಹೊರಟ್ಟಿ ತೃತೀಯ ಸ್ಥಾನ, ಪದವಿ ಪೂರ್ವ ವಿಭಾಗದಲ್ಲಿ ಲಕ್ಷ್ಮಿ ಬಿ. ಕಾಸಾರ ಪ್ರಥಮ, ಎಸ್.ಎಮ್.ಸವದತ್ತಿ ದ್ವೀತಿಯ, ಸಹನಾ ಎಲ್ ಕರಿಶೆಟ್ಟಿ ಹಾಗೂ ಪ್ರಣಿತ ಪಿ.ಕಮತೆ ತೃತೀಯ ಸ್ಥಾನ , ಪದವಿ/ಸ್ನಾತ್ತಕೋತ್ತರ ಪದವಿ ವಿಭಾಗದಲ್ಲಿ ಕೃತಿಕಾ ಅಲಾಡಲಿ ಪ್ರಥಮ, ಶ್ರವಣ ಸನದಿ ದ್ವೀತಿಯ ಹಾಗೂ ರೋಹಿತ ಅವಟಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಅಸೀಫ್ ಸೇಠ್ ಹಾಗೂ ಗಣ್ಯರುಗಳು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.

ಇದಕ್ಕೂ ಮುಂಚೆ ಮಹಾಪೌರರಾದ ಸವಿತಾ ಕಾಂಬಳೆ ಧ್ವಜಾರೋಹಣ ನೆರವೇರಿಸಿದರು. ನಂತರ ಮಹಾತ್ಮಾ ಗಾಂಧೀಜಿಯ ಅವರ 155ನೇ ಜಯಂತಿ ಅಂಗವಾಗಿ ನಡೆಸ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕರಾದಿಯಾಗಿ ಎಲ್ಲ ಗಣ್ಯರು ಪಾಲ್ಗೊಂಡರು.

ಮಹಾನಗರ ಪಾಲಿಕೆ ಮಹಾಪೌರ ಸವಿತಾ ಕಾಂಬಳೆ, ಉಪ ಮಹಾಪೌರ ಆನಂದ ಚವ್ಹಾಣ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ, ದಲಿತ ಸಂಘಟನೆಯ ಮುಖಂಡ ಮಲ್ಲೇಶ್ ಚೌಗಲೆ, ಮಹಾನಗರ ಪಾಲಿಕೆ ನಗರ ಸೇವಕರು, ಗಣ್ಯರುಗಳು, ಭಾರತ ಸೇವಾ ದಳದ ಸದಸ್ಯರು, ಸಾರ್ವಜನಿಕರು, ವಿವಿಧ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿನಾಯಕ ಮೋರೆ ಹಾಗೂ ತಂಡದವರು ಗಾಂಧೀ ಪ್ರಿಯ ಭಜನೆಗಳನ್ನು ಪ್ರಸ್ತುತಿಸಿದರು. ಸರ್ವಮಂಗಳ ಅರಳೀಮಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿಗಳಿಂದ ಸ್ವಚ್ಛತಾ ನಡಿಗೆ:

ಕಾರ್ಯಕ್ರಮಕ್ಕೂ ಮೊದಲು ಮಹಾತ್ಮಾ ಗಾಂಧೀಜಿ ಅವರ 155ನೇ ಜಯಂತಿ ಪ್ರಯುಕ್ತ ನಗರದ ಗೋಗಟೆ ವೃತ್ತದಲ್ಲಿ ಸ್ವಚ್ಛತಾ ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಚಾಲನೆ ನೀಡಿದರು.

ಗೋಗಟೆ ವೃತ್ತದಿಂದ ಕಾಂಗ್ರೆಸ್ ಮಾರ್ಗವಾಗಿ ವೀರಸೌಧದವರೆಗೆ ನಡೆದ ಸ್ವಚ್ಛತಾ ನಡಿಗೆಯಲ್ಲಿ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ ಹಾಗೂ ಸೇವಾದಳದ ಮಕ್ಕಳು ಪಾಲ್ಗೊಂಡಿದ್ದರು.

IMG 20241002 WA0040 -

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ್, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

error: Content is protected !!