23/12/2024
IMG-20240922-WA0007

ಬೆಳಗಾವಿ-೨೨: ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದರ ಜತೆಗೆ ಸಾಮಾಜಿಕ, ಶೈಕ್ಷಣಿಕ ಚಿಂತನೆ ಮಾಡುವ ಪ್ರಜ್ಞೆ ಇಟ್ಟುಕೊಂಡರೆ ಸಂಸ್ಥೆ ಬೆಳೆಯಲು ಸಾಧ್ಯ. ಇದಕ್ಕೆ ಪೂರಕವಾಗಿ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಬೆನನ್‌ಸ್ಮಿತ್ ಪ.ಪೂ. ಕಾಲೇಜಿನ ಇತಿಹಾಸ ಉಪನ್ಯಾಸಕ ಶ್ರೀಕಾಂತ ಶಾನವಾಡ ಹೇಳಿದರು.

ನಗರದ ಭಡಕಲ್ ಗಲ್ಲಿಯಲ್ಲಿ ರವಿವಾರ ನಡೆದ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ 12ನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ನಿಮಿತ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಗದು ಮೊತ್ತ ವಿತರಿಸಿ ಅವರು ಮಾತನಾಡಿದರು.

ಸಹಕಾರ ಸಂಸ್ಥೆಗಳು ಗ್ರಾಹಕರಿಗೆ ಆರ್ಥಿಕವಾಗಿ ಲಾಭ ಮಾಡಿಕೊಡಬೇಕು. ಜತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸೇವೆ ಸಲ್ಲಿಸಿದರೆ ಸಂಸ್ಥೆಗಳು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ಸಾಧ್ಯ. ಸಹಕಾರಿ ಸಂಸ್ಥೆಗಳು ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಆಡಳಿತ ವ್ಯವಸ್ಥೆ ಗಟ್ಟಿಯಾದಷ್ಟು ಸಂಘ ಗಟ್ಟಿಯಾಗುತ್ತದೆ. ಗುರು ವಿವೇಕಾನಂದ ಸೊಸೈಟಿ ಗಟ್ಟಿಯಾಗಿ ನೆಲೆ ನಿಂತು ಗ್ರಾಹಕರ ಹೃದಯ ಗೆಲ್ಲುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಸಂಸ್ಥೆಗಳು ಗ್ರಾಹಕರ ಹಿತ ಕಾಪಾಡಬೇಕು. ಗ್ರಾಹಕರ ಶ್ರೇಯೋಭಿವೃದ್ಧಿಗಾಗಿ ಚಿಂತಿಸಿದರೆ ಸಂಸ್ಥೆಗಳು ಆಳವಾಗಿ ಬೇರೂರಲು ಸಾಧ್ಯ. ಇದರಿಂದ ಮುಂದಿನ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಲಾಭ ಪಡೆಯಬಹುದಾಗಿದೆ. ತಕ್ಷಣಕ್ಕೆ ಸಿಗುವ ಲಾಭಕ್ಕಿಂತ ನಿಧಾನವಾಗಿ ಬರುವ ಲಾಭ ಶಾಶ್ವತವಾಗಿ ಇರುತ್ತದೆ. ಆಡಳಿತ ವ್ಯವಸ್ಥೆ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳಿಂದ ಸಂಸ್ಥೆಯ ಭವಿಷ್ಯ ನಿಂತಿರುತ್ತದೆ. ಗ್ರಾಹಕರಿಗೆ ಒಂದು ಪೈಸೆಯೂ ನಷ್ಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಹಕಾರಿ ಸಂಸ್ಥೆಗಳಾಗಿದ್ದಾಗಿದೆ ಎಂದರು.

ಸಾಧನೆ ಮಾಡಲು ಗಡಿಯಲ್ಲಿ ನಿಂತು ಬಂದೂಕು ಹಿಡಿದು ಹೋರಾಟ ಮಾಡಬೇಕೆಂದೇನಿಲ್ಲ. ಫೈವ್ ಸ್ಟಾರ್ ಹೊಟೇಲ್ ತೆರೆದು ಲಾಭ ಗಳಿಸಬೇಕೆಂದೇನಿಲ್ಲ. ನನ್ನೊಂದಿಗೆ ಇದ್ದ ಒಬ್ಬನಿಗೆ ಉಪಕಾರ ಮಾಡಿದರೆ ಸಾಕು ಅದುವೇ ದೊಡ್ಡ ಸಾಧನೆ. ಸಮಾಧಾನ, ಕಲಿಯುವಿಕೆ, ಮಾಡುವಿಕೆ ವಿಚಾರ ಇದ್ದರೆ ಉನ್ನತ ಸಾಧನೆ ಮಾಡಲು ಸಾಧ್ಯ. ಕಾರ್ಯತತ್ಪರತೆಯನ್ನು ನಾವು ಗಮನಿಸಬೇಕು, ಜನಹಿತ, ಜನ ಕಲ್ಯಾಣಕ್ಕಾಗಿ ದುಡಿಯಬೇಕು. ಸಮಾಜ ಮತ್ತು ದೇಶಕ್ಕೆ ನಿಷ್ಠರಾಗಿರಬೇಕು ಎಂದು ಹೇಳಿದರು.

ಗುರು ವಿವೇಕಾನಂದ ಸೊಸೈಟಿ ಚೇರಮನ್ ಡಾ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಒಂದು ಸಂಸ್ಥೆ ಸಮಾಜ ಮುಖಿವಾಗಿ ಬೆಳೆಯಬೇಕು. ಅದು ತಾನು ಬೆಳೆಯುವುದರ ಜತೆಗೆ ತನ್ನ ಸುತ್ತಲಿನ ಸಮಾಜವನ್ನು ಬೆಳೆಸಬೇಕು. ಆಗ ಮಾತ್ರ ಆ ಸಂಸ್ಥೆ ಸಾರ್ಥಕವಾಗುತ್ತದೆ. ಎಲ್ಲಿ ಸಾರ್ಥಕತೆಯ ಭಾವ ಬರುತ್ತದೆಯೋ ಅಲ್ಲಿ ಸರ್ವರ ಆಶೀರ್ವಾದವೂ ಆ ಸಂಸ್ಥೆ ಮೇಲೆ ಇರುತ್ತದೆ. ವ್ಯಕ್ತಿಕೇಂದ್ರಿತ ವ್ಯವಸ್ಥೆಗಿಂತಲೂ ಸಮಷ್ಟಿ ಕೇಂದ್ರೀತವಾದ ವ್ಯವಸ್ಥೆ ಅದು ಸಾರ್ವಕಾಲಿಕ ಬಾಳುತ್ತದೆ. ವ್ಯಕ್ತಿ ಇಂದಲ್ಲ ನಾಳೆ ಸಾಯಬಹುದು. ಆದರೆ ಒಂದು ಗಟ್ಟಿಯಾದ ವ್ಯವಸ್ಥೆ ಹೊಂದಿರುವ ವ್ಯವಸ್ಥೆ ಸಂಘ, ಸಂಸ್ಥೆಯನ್ನು ಸದಾಕಾಲ ಮುನ್ನಡೆಸುತ್ತದೆ. ನಮ್ಮ ಸಂಸ್ಥೆಯು ಕಳೆದ ಸಾಲಿಗಿಂತ ಠೇವಣಿಯಲ್ಲಿ, ಸಾಲದಲ್ಲಿ, ಲಾಭದಲ್ಲಿ ಗಣನೀಯವಾಗಿ ಬೆಳವಣಿಗೆ ಕಂಡಿದೆ. ಈ ವರ್ಷ ಸಂಘದ ದುಡಿಯುವ ಬಂಡವಾಳ 188832831.89 ರೂ. ಸಾಲ 136330532ರೂ., ಠೇವಣಿ 15,1633174.60 ಹಾಗೂ ನಿವ್ವಳ ಲಾಭ 44,52,233.89 ರೂ. ಗಳಿಸಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಮೊತ್ತ ವಿತರಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ಸಂಘದ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ರಾಜೇಶ ಗೌಡ, ವಿದ್ಯಾರ್ಥಿನಿ ಶಾಂಭವಿ ಥೋರಲೆ ಅನಿಸಿಕೆ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಆನಂದ ರಾವ್, ನಿರ್ದೇಶಕರಾದ ಭಾರತಿ ಶೆಟ್ಟಿಗಾರ, ಸತೀಶ ಮನ್ನಿಕೇರಿ, ಆನಂದ ಶೆಟ್ಟಿ, ಗಣೇಶ ಮರಕಲ್, ದುರ್ಗಪ್ಪ ತಳವಾರ, ರೂಪಾ ಮಗದುಮ್ಮ, ಗಣೇಶ ನಾಯಕ, ಚಂದ್ರಕಾಂತ ಅಥಣಿಮಠ ಸೇರಿದಂತೆ ಪಿಗ್ಮಿ ಸಂಗ್ರಹಕಾರರು, ಗ್ರಾಹಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭೈರೋಬಾ ಕಾಂಬಳೆ ಸ್ವಾಗತಿಸಿ, ಪರಿಚಯಿಸಿದರು. ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು. ಅಂಜನಕುಮಾರ ಗಂಡಗುದರಿ ವಂದಿಸಿದರು.

error: Content is protected !!