ಬೆಳಗಾವಿ-೨೦ :ಬೆಳಗಾವಿ ಪಾಲಿಕೆಯು ಇಪ್ಪತ್ತು ಕೋಟಿ ದಂಡ ನೀಡುವ ವಿಷಯದ ಬಗ್ಗೆ ಮಾತನಾಡಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಮೇಶ ಕುಡಚಿ ಮಾತನಾಡಿ, ಪಾಲಿಕೆ ದಂಡ ನೀಡದೇ, ಸ್ಮಾರ್ಟ್ ಸಿಟಿ ಇದರ ಹೊಣೆ ಹೊರಬೇಕು, ಒಂದು ವೇಳೆ ದಂಡ ನೀಡಬೇಕಾದರೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪರಿಷತ್ತಿನ ಒಪ್ಪಿಗೆ ಪಡೆದು ನೀಡಬೇಕು, ಇಲ್ಲಿ ಜಿಲ್ಲಾಡಳಿತ, ಶಾಸಕರು, ಜಿಲ್ಲಾ ಸಚಿವರು ನಿರ್ಣಯ ತೆಗೆದುಕೊಳ್ಳಲು ಬರುವದಿಲ್ಲ ಎಂದು ಹೇಳಿದರು.
ಭೂ ಅತಿಕ್ರಮಣದ ದಂಡದ ಹಣ ಯಾರು ತುಂಬಬೇಕು, ಯಾರ ಸಮ್ಮತಿಯಿಂದ ತುಂಬಬೇಕು, ಯಾರ ತಪ್ಪು, ಯಾರದ್ದು ಸರಿ ಎಂಬುದನ್ನ ಮಾತಾಡಿದ ರಮೇಶ್ ಕುಡಚಿ, ನಂತರ ನಿಜ ವಿಷಯಕ್ಕೆ ಬಂದು, ನಾನು ಬೆಳಗಾವಿ ಕಾಂಗ್ರೆಸ್ ಈಗಿನ ಪರಿಸ್ಥಿತಿ ಬಗ್ಗೆ ಮಾತನಾಡಬೇಕಿದೆ ಎಂದು ಪ್ರಾರಂಭಿಸಿದರು.
ಈಗ ಪಾಲಿಕೆಯ ನಾಮನಿರ್ದೇಶಿತ ಸದಸ್ಯರ ಬಗ್ಗೆ ವಿರೋಧ ವ್ಯಕ್ತಪಡಿಸಿ, ಅವರು ಪಕ್ಷದ ವಿರೋಧ ಚಟುವಟಿಕೆ ಮಾಡಿದವರು ಅಂತವರನ್ನು ಇವರು ಆಯ್ಕೆ ಮಾಡುತ್ತಾರೆ ಎಂದರೆ ಹೇಗೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು, ಚಿಕ್ಕೋಡಿಯಿಂದ ಬಂದು ಇಲ್ಲಿ ಬುಡಾ ಅಧ್ಯಕ್ಷ ಆಗುವದು ಯಾವ ನ್ಯಾಯ? ಇದರ ಬಗ್ಗೆ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕು ಎಂದು ಹೇಳಿದರು.
ತಮ್ಮ ರಾಜಕೀಯ ಲಾಭಕ್ಕಾಗಿ ಜಿಲ್ಲಾ ಕಾಂಗ್ರೆಸ್ ನಾಯಕರು ಇಂದು ಏನೇನೋ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ ಅವರು, ಜಿಲ್ಲಾ ಅಧ್ಯಕ್ಷರ ಸ್ಥಾನಗಳು ಕೂಡಾ ಹಲವು ವರ್ಷಗಳಿಂದ ಬದಲಾಗಿಲ್ಲ ಎಂದು ಹೇಳಿದರು.