ಬೆಳಗಾವಿ-೧೮:ಗಣಪತಿ ಪಪ್ಪಾ ಮೊರ್ಯಾ…. ಪೂರ್ಶ್ಯಾ ವರಷಿ ಲೌಕರ ಯಾ ಜೈಕಾರ ದೊಂದಿಗೆ ಕಳೆದ ೧೧ ದಿನಗಳಿಂದ ಕುಂದಾನಗರಿ ಬೆಳಗಾವಿಯಲ್ಲಿ ಸಾರ್ವಜನಿಕ ಮಂಡಳಿಗಳು ಹಾಗೂ ಮನೆಗಳಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ಭಕ್ತರು, ಮಂಗಳವಾರ ಅಂತಿಮ ವಿದಾಯ ಹೇಳಲು ಸಜ್ಜಾಗಿದ್ದಾರೆ. ನಗರದಲ್ಲಿ ೩೯೦ಕ್ಕೂ ಅಧಿಕ ಸಾರ್ವಜನಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಗಾವಿ ಅಷ್ಟೇ ಅಲ್ಲದೇ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಗಣೇಶನ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿತ್ತು. ೧೧ ದಿನಗಳ ಭಕ್ತಿಯಿಂದ ಧಾರ‍್ಮಿಕ ವಿಧಿ ಕೈಗೊಂಡ ಭಕ್ತರು, ಮೋದಕ(ಗಣಪತಿ)ಪ್ರಿಯನಿಗೆ(ವಿದಾಯ)ಬೀಳ್ಕೊಟ್ಟರು.
ಬೃಹದಾಕಾರ ಬೆನಕನ ಮೂರ್ತಿಗಳ ಭವ್ಯ ಮೆರವಣಿಗೆ: ಬೆಳಗಾವಿಯ ನಗರ ಮಾರುತಿ ಸಮೀಪವಿರುವ ಹುತಾತ್ಮ ಚೌಕ್‌ನಲ್ಲಿ ಸಂಜೆ ೫.೩೦ಕ್ಕೆ ಆರಂಭಗೊಂಡು ಸಾರ್ವಜನಿಕ ಮೂರ್ತಿಗಳ ಭವ್ಯ ಮೆರವಣಿಗೆ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ‍್ಮವೀರ ಸಂಭಾಜಿ ವೃತ್ತ, ಕಿರ‍್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ ರಸ್ತೆ, ಟಿಳಕ ಚೌಕ್, ಹೆಮು ಕಲಾನಿ ಚೌಕ್, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡಕ್ಕೆ ಬಂದು ತಲುಪಲಿದವು. ಮೆರವಣಿಗೆ ಉದ್ದಕ್ಕೂ ರೂಪಕಗಳು, ವಿವಿಧ ಕಲಾತಂಡಗಳು ಕಣ್ಮನ ಸೆಳೆದವು.