ಬೆಳಗಾವಿ-೧೭: ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥವಾಗಿ “ಸ್ವಚ್ಛ ಭಾರತ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮಾ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ಮಾತ್ರವಲ್ಲದೆ, ಸ್ವಚ್ಛ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಕಂಡಿದ್ದರು. ಅವರು ಕಂಡಂತಹ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ಮ ಪರಿಸರದ ಸ್ವಚ್ಛತೆಗೆ ನಾವೆಲ್ಲ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನುಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ ಜರುಗಿದ “ಸ್ವಚ್ಛತಾ ಹೀ ಸೇವಾ” ಪಾಕ್ಷಿಕ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರ ಧ್ಯೇಯವಾಕ್ಯ “ಸ್ವಚ್ಛತೆಯೇ ದೈವತ್ವ” ಎಂಬ ಕನಸನ್ನು ನನಸಾಗಿಸಲು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ’ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ’ ಎಂಬ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ವಿಶೇಷ ಆಂದೋಲನದ ಘೋಷವಾಕ್ಯವಾಗಿ ಸ್ವಭಾವ ಸ್ವಚ್ಛತಾ; ಸಂಸ್ಕಾರ ಸ್ವಚ್ಛತಾ ಎಂದು ಘೋಷಿಸಲಾಗಿದೆ. ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ, ಸಧೃಢ ಗ್ರಾಮಗಳನ್ನು ರೂಪಿಸುವ ಮಹತ್ವಾಕಾಂಕ್ಷಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಭಾರತದ ಜವಾಬ್ದಾರಿಯುತವಾದ ಪ್ರಜೆಗಳಾದ ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವದರ ಜೊತೆಗೆ ಇತರರಿಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿ.ಇ.ಓ. ರಾಹುಲ ಶಿಂಧೆ, ಜಿ.ಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಸ್ತ್ರೀ ಶಕ್ತಿ ಸಂಘಗಳು ಶಾಲಾ ಕಾಲೇಜು ವಿಧ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರತಿಜ್ಞಾ ವಿಧಿ:
ಸೆ. 17 ರಿಂದ ಅಕ್ಟೋಬರ 2 ರ ವರೆಗೆ ಜರುಗಲಿರುವ ಸ್ವಚ್ಛತಾ ಹಿ ಸೇವಾ ಜನಾಂದೋಲನದ ಅಂಗವಾಗಿ ದೇಶವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವ ಮೂಲಕ ಭಾರತ ಮಾತೆಗೆ ಸೇವೆ ಸಲ್ಲಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.