23/12/2024
IMG-20240910-WA0000

ಬೆಳಗಾವಿ-೧೦:ಬೆಳಗಾವಿ ಜಿಲ್ಲೆಯ ಜನರ ಬಹಳ ದಿನಗಳ ಬೇಡಿಕೆಯನಿಸಿದ್ದ ಬೆಳಗಾವಿ – ಪುಣೆ ನಡುವೆ ಅತಿ ವೇಗದ “ವಂದೇ ಭಾರತ್” ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವರು ಹಸಿರು ನಿಶಾನೆ ನೀಡಿರುವುದು ಅತ್ಯಂತ ಸಂತಸದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ – ಪುಣೆ ನಡುವೆ ವಂದೇ ಭಾರತ್ ನೂತನ ರೈಲು ಸಂಪರ್ಕಕ್ಕಾಗಿ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಇವರನ್ನು ಭೇಟಿ ಮಾಡಿ, ಪ್ರಸ್ತಾಪಿತ ಮಾರ್ಗದಲ್ಲಿ ಈ ರೈಲನ್ನು ಪ್ರಾರಂಭಿಸುವಂತೆ ವಿನಂತಿಸಿದ್ದು, ಅವರು ಈ ಬೇಡಿಕೆಯನ್ನು ಖಂಡಿತವಾಗಿಯೂ ಈಡೇರಿಸುವ ಕುರಿತು ಭರವಸೆಯನ್ನು ನೀಡಿದ್ದರು, ಇಂದು ಭರವಸೆ ಈಡೇರಿದಂತಾಗಿದೆ.

ಬೆಳಗಾವಿ – ಪುಣೆ ನಗರಗಳ ನಡುವೆ ವಂದೇ ಭಾರತ್ ನೂತನ ರೈಲು ಸಂಚಾರ ದಿನಾಂಕ 15 ಸೆಪ್ಟಂಬರ್ 2024 ರಂದು ಮಾನ್ಯ ಪ್ರಧಾನಮಂತ್ರಿಗಳಿಂದ ಉದ್ಘಾಟನೆಗೊಳ್ಳಲಿದ್ದು, ಅದರಂತೆ ಸಾಯಂಕಾಲ ಬೆಳಗಾವಿಯಲ್ಲಿ ಇದನ್ನು ನಾವು ಬರ ಮಾಡಿಕೊಳ್ಳುವುದಕ್ಕೆ ಅತ್ಯಂತ ಉತ್ಸುಕತೆಯಿಂದ ಕಾದಿದ್ದೇವೆ.

ಅದೇ ರೀತಿಯಾಗಿ ಬೆಂಗಳೂರು – ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ್ ರೈಲು ಕೂಡ ಬೆಳಗಾವಿ ನಗರದ ವರೆಗೂ ವಿಸ್ತರಿಸುವ ಬಗ್ಗೆಯೂ ಸಹ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಇವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಈ ಬೇಡಿಕೆಯನ್ನು ಸಹ ಅವರು ಪರಿಗಣಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಬೆಳಗಾವಿಯಿಂದ ಪುಣೆ ವರೆಗೆ ವಂದೇ ಭಾರತ್ ರೈಲು ಸಂಚಾರದ ಕುರಿತಾದ ಮಹತ್ವದ ಬೇಡಿಕೆ ಈಡೇರಿಸಿದ್ದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.

error: Content is protected !!