23/12/2024
ಶಿಕ್ಷಕರ ದಿನಾಚರಣೆಯ-2024 (8)

ಅಜ್ಞಾನ ದೂರವಾಗಿಸಿ ಜ್ಞಾನದ ಕಡೆಗೆ ಕೊಂಡೊಯ್ಯುವ ಶಿಕ್ಷಕರ ಸೇವೆ ನಿರಂತರವಾದದ್ದು:ಶಾಸಕ ಆಸೀಫ್ (ರಾಜು) ಸೇಠ್

ಬೆಳಗಾವಿ-೦೬: ವಿದ್ಯಾರ್ಥಿಗಳಲ್ಲಿರುವ ಅಜ್ಞಾನವನ್ನು ದೂರ ಮಾಡಿ ಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಿಕ್ಷಕರ ಸೇವೆ ನಿರಂತರವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಕರ್ತವ್ಯ ಪಾಲನೆ ಬಹು ಮುಖ್ಯದಾಗಿರುತ್ತದೆ. ಕಲ್ಲನ್ನು ಶಿಲೆಯಾಗಿಸುವ ಸಾಮರ್ಥ್ಯ ಇರುವದು ಶಿಕ್ಷಕರಿಗೆ ಮಾತ್ರ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ನಗರ ಇವರ ಸಂಯಕ್ತಾಶ್ರಯದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-೨೦೨೪ ಹಾಗೂ ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ನಗರ ವಲಯ ಮಟ್ಟದ ಪ್ರತಿಭಾಕಾರಂಜಿ ಕಲೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತಮ್ಮ ಜ್ಞಾನದ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಾರೆ. ಈ ದಿನದಂದು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿ ಗೌರವಾರ್ಪಣೆ ಮಾಡಬೇಕು ಎಂದು ಹೇಳಿದರು.
ಹಿಂದೆ ಗುರುವಿರಲಿ ಮುಂದೆ ಗುರಿಯಿರಲಿ ಎಂಬ ಮಾತಿದೆ ಅದೇ ರೀತಿ ಶಿಕ್ಷಕರು ಯಾವಾಗಲೂ ನಮಗೆ ಗುರಿ ತೋರಿಸುತ್ತಾರೆ. ನಾವು ಆ ಗುರಿಯನ್ನು ಪಥದಲ್ಲಿ ನಡೆಯಬೇಕಷ್ಟೆ. ಆಟ, ಪಾಠ, ಸಂಗೀತ-ನೃತ್ಯ ಎಲ್ಲವನ್ನು ಕೂಡ ಶಿಕ್ಷಕರು ಕಲಿಸುತ್ತಾರೆ. ಮನೆಯಲ್ಲಿ ನಾವು ತಂದೆ ತಾಯಿಯರನ್ನು ಯಾವ ರೀತಿ ಪ್ರೀತಿಸುತ್ತೇವೋ ಅದೇ ರೀತಿ ಶಾಲೆಯಲ್ಲಿ ಮಾರ್ಗದರ್ಶಕರಾದ ಶಿಕ್ಷಕರನ್ನು ಪ್ರೀತಿಸುತ್ತೇವೆ. ನಮ್ಮ ಜೀವನದಲ್ಲಿ ಗೆಲುವು, ಸಾಧನೆಯ ಕ್ಷಣವನ್ನು ಕಾಣಬೇಕೆಂದರೆ ಅದಕ್ಕೆ ಶಿಕ್ಷಕರು ಕಾರಣ. ಪ್ರತಿಯೊಬ್ಬ ಶಿಕ್ಷಕರು ಸಹ ತಮ್ಮ ಶಿಷ್ಯರ ಅಥವಾ ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮಾಡಲು ಸ್ಪೂರ್ತಿ ತುಂಬುತ್ತಾರೆ. ಎಲ್ಲರೂ ಶಿಕ್ಷಕರ ವೃತ್ತಿಯನ್ನು ಗೌರವಿಸಬೇಕು ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಲಿಷ್ಠ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ಧಿ, ಕಲಿಸಿ ಬದುಕು ರೂಪಿಸುವ ಶಿಲ್ಪಿ ಎಂದರು.
ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಶಿಸ್ತು ಜೀವನ ಕಲಿಸುವ ಶಿಕ್ಷಕರ ವೃತ್ತಿ ಅಮೂಲ್ಯವಾದುದ್ದು. ಶಿಕ್ಷಣಕ್ಕೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರತಿಯೊಬ್ಬರೂ ಶಿಕ್ಷಕರಿಗೆ ಗೌರವ ನೀಡಬೇಕು ಎಂದು ಅವರು ಜಿ.ಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ (ಆಡಳಿತ ) ಲೀಲಾವತಿ ಹಿರೇಮಠ ಅವರು ಮಾತನಾಡಿ ಪ್ರತಿಯೊಂಬ ವಿದ್ಯಾರ್ಥಿಯ ಜೀವನವನ್ನು ಉತ್ತಮವಾಗಿಸಲು ಶಿಕ್ಷಕರ ಪಾತ್ರ ಬಹು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಮನೆಯಲ್ಲಿ ತಂದೆ-ತಾಯಿಯನ್ನು ಕಾಣುವ ರೀತಿ, ಗೌರವಿಸುವಂತೆ ಶಿಕ್ಷಕರನ್ನು ಗೌರವಿಸಬೇಕು ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮ:
ಇದಕ್ಕೂ ಮುಂಚೆ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಹಾಗೂ ಬೆಳಗಾವಿ ನಗರ ವಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢ ಶಾಲೆಯ ೩ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿದರು.
ಬೆಳಗಾವಿ ನಗರ ವಲಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಫಲಕ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿ ಪ್ರಧಾನ ಹಾಗೂ ಸೌಟ್ಸ್ ಮತ್ತು ಗೈಡ್ಸ್ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಳಗಾವಿ ವಿಭಾಗದ ಪದವಿ ನಿಮಿತ್ತ ಸಹ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಡಯಟ್ ಮಣ್ಣೂರ (ಅಭಿವೃದ್ಧಿ) ಉಪನಿರ್ದೇಶಕರಾದ ಬಸವರಾಜ ನಾಲತವಾಡ, ನಗರ ವಲಯದ (ಪ್ರಭಾರ ) ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆಯ್. ಡಿ. ಹಿರೇಮಠ, ಉಪನಿರ್ದೇಶಕರ ಕಚೇರಿ ಮತ್ತು ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!