23/12/2024
IMG-20240905-WA0045

ನೇಸರಗಿ-೦೫:ಸ್ವತಂತ್ರ ಜಿಲ್ಲೆಯಾಗಬಲ್ಲ ಎಲ್ಲ ಅರ್ಹತೆ ಹೊಂದಿರುವ ಬೈಲಹೊಂಗಲ ತಾಲೂಕಿನ ಸಾಂಸ್ಕೃತಿಕ ಲೋಕದ ಸಮಗ್ರ ನೋಟ ನೀಡುವ “ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ” ಸಂಶೋಧನಾತ್ಮಕ ಕೃತಿ ಮಾದರಿಯಾಗಿ ಹೊರ ಹೊಮ್ಮಿದೆ ಎಂದು ಬೆಳಗಾವಿಯ ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.
ಸಮೀಪದ ನಾಗನೂರ ಗ್ರಾಮದಲ್ಲಿ ಬುಧುವಾರ ಸಂಜೆ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಂಗವಾಗಿ ನಡೆದ ಕಾಯಕಯೋಗಿ, ಶತಾಯುಷಿ ಡಾ.ಶಿವಬಸವ ಮಹಾಸ್ವಾಮೀಜಿ ೩೦ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಿ.ವಾಯ್.ಮೆಣಸಿನಕಾಯಿ ರಚಿಸಿದ ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮನುಷ್ಯ ಇಹ ಪರಗಳಲ್ಲಿ ಕೀರ್ತಿ ಶೇಷನಾಗಬೇಕೆಂದರೆ ಒಳ್ಳೆಯ ಗ್ರಂಥವನ್ನಾದರೂ ರಚಿಸಬೇಕು. ಇಲ್ಲವೆ ಒಂದೊಳ್ಳೆ ಗ್ರಂಥಕ್ಕೆ ವಸ್ತು ವಿಷಯವಾದರೂ ಆಗಬೇಕು. ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಕೃತಿಯು ಯಾವ ಪಿಎಚ್‌ಡಿ ಪ್ರಬಂಧಕ್ಕೂ ಕಡಿಮೆಯಿಲ್ಲ. ಇಲ್ಲಿಯ ಪ್ರಾಚೀನ ಇತಿಹಾಸ, ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ವೀರರಾಣಿ ಬೆಳವಡಿ ಮಲ್ಲಮ್ಮ, ಕಿತ್ತೂರ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ವಡ್ಡರ ಯಲ್ಲಣ್ಣ ಮೊದಲಾದವರ ವಿವರಣೆ, ಇಲ್ಲಿಯ ಮಠ ಪರಂಪರೆ, ಭೌಗೋಲಿಕ ಪರಿಸರ, ಸಾಹಿತಿಗಳು, ನಾಟಕಾರರು, ಕಸಾಪ ನಡೆದು ಬಂದ ದಾರಿ, ರಾಜಕೀಯ ವ್ಯಕ್ತಿಗಳು ಮೊದಲಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಎಲ್ಲರೂ ಓದಲೇಬೇಕಾದ ಚಾರಿತ್ರಿಕ ಕೃತಿ ಇದಾಗಿದೆ ಎಂದರು.
ಲೇಖಕ ಸಿ.ವಾಯ್.ಮೆಣಸಿನಕಾಯಿ ಮಾತನಾಡಿ, ಬೈಲಹೊಂಗಲ ಬಹು ವಿಸ್ತಾರವಾದ ಭೌಗೋಳಿಕ ಕ್ಷೇತ್ರವನ್ನು ಹೊಂದಿ, ಐತಿಹಾಸಿಕ, ಚಾರಿತ್ರಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದ ದೃಷ್ಟಿಯಿಂದ ಬಹಳ ಒಳ್ಳೆಯ ಸ್ಥಾನವನ್ನು ಹೊಂದಿದೆ. ಬೈಲಹೊಂಗಲ ತಾಲೂಕಿನಲ್ಲಿ ಸಾಕಷ್ಟು ಅರಸರು, ರಾಣಿಯರು ಆಳಿ ಹೋಗಿದ್ದಾರೆ. ಇಲ್ಲಿಯ ಮಣ್ಣಿನ ಗುಣದಲ್ಲಿ ಶೂರರನ್ನು ಹುಟ್ಟಿಸುವ ತಾಕತ್ತು ಇದೆ. ಇಲ್ಲಿ ಆಗಿ ಹೋದ ಮಹಾತ್ಮರು, ವ್ಯಕ್ತಿಗಳು ಇತಿಹಾಸ ಪುಟಗಳಲ್ಲಿ ಒಳ್ಳೆಯ ಕಾರ್ಯವನ್ನು ತೋರಿಸಿದ್ದಾರೆ. ಈ ನೆಲದ ಋಣ ತೀರಿಸುವ ನಿಟ್ಟಿನಲ್ಲಿ ಈ ಕೃತಿಯನ್ನು ರಚಿಸುವಲ್ಲಿ ಪ್ರೇರೆಪಿಸಿತು ಎಂದರು.
ಬೆಳಗಾವಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ಆಶಿರ್ವಚನ ನೀಡಿ, ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿಯವರು ನಾಡು ಕಂಡ ಅತ್ಯುತ್ತಮ ಬರಹಗಾರರು, ತಮ್ಮ ಕೃತಿಯಲ್ಲಿ ನಾಗನೂರ ಮಠ ಸೇರಿದಂತೆ ತಾಲೂಕಿನ ಮಠಗಳ ಇತಿಹಾಸವನ್ನು ಅಕ್ಷರ ರೂಪಕ್ಕೆ ತಂದಿದ್ದಾರೆ. ಬೈಲಹೊಂಗಲ ತಾಲೂಕಿನಲ್ಲಿ ಅನೇಕ ಶೂರರು, ಧೀರರು, ಮಹಾತ್ಮರು, ಜಾನಪದ ಸಾಹಿತಿಗಳು, ಆಗಿ ಹೋಗಿದ್ದಾರೆ. ಇಲ್ಲಿಯ ಅಭಿವೃದ್ದಿಗೆ ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ. ಅವುಗಳೆಲ್ಲವನ್ನು ದಾಖಲೆ ರೂಪದಲ್ಲಿ ಒರೆಗೆ ಹಚ್ಚಿ ಸಂಶೋಧನಾತ್ಮಕ ಕೃತಿ ರಚಿಸಿರುವುದು ಶ್ಲಾಘನೀಯವೆಂದರು.
ಕುಲವಳ್ಳಿಯ ಸುಕುಮಾರ ಆಶ್ರಮದ ಓಂಗುರೂಜಿ ಮಾತನಾಡಿ, ಅಥಣಿಯ ಮುರಘೇಂದ್ರ ಸ್ವಾಮೀಜಿಗಳು ನಾಡು ಕಂಡ ಅದ್ವೀತಿಯ ಮಹಾತ್ಮರಲ್ಲೊಬ್ಬರಾಗಿದ್ದಾರೆ. ಹಿಂದಿನ ಶರಣರು, ಮಹಾತ್ಮರು ದೇಶ ಮತ್ತು ಜನರ ಉದ್ಧಾರಕ್ಕೆ ಸಾಕಷ್ಟು ಕೊಡುಗೆ ನೀಡಿ ಹೋಗಿದ್ದಾರೆ. ಇಂದಿನ ಯುವ ಪೀಳಿಗೆ ಮಹಾತ್ಮರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಸತ್ಕರಿಸಲಾಯಿತು.
ಸೊಲ್ಲಾಪೂರದ ಶಿವಬಸವ ದೇವರು ನೇತೃತ್ವ ವಹಿಸಿದ್ದರು. ಸಾಹಿತಿಗಳಾದ ಸ.ರಾ.ಸೂಳಕೂಡೆ, ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ವಾಯ್.ಮೆಣಸಿನಕಾಯಿ, ಸಾಹಿತಿ ಜಾನಕಿ ಭದ್ರನ್ನವರ, ಸುತ್ತಮುತ್ತಲಿನ ಸಾವಿರಾರು ನಾಗರಿಕರು ಪಾಲ್ಗೊಂಡಿದ್ದರು. ಶಿಕ್ಷಕ ಪ್ರಕಾಶ ನಾಯ್ಕರ ನಿರೂಪಿಸಿ, ವಂದಿಸಿದರು.
ಪೋಟೊ ಶೀರ್ಷಿಕೆ-
೫ನೇಸರಗಿ೧
ನೇಸರಗಿ ಸಮೀಪದ ನಾಗನೂರ ಗ್ರಾಮದಲ್ಲಿ ಬುಧುವಾರ ಸಂಜೆ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಿ.ವಾಯ್.ಮೆಣಸಿನಕಾಯಿ ರಚಿಸಿದ ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಕೃತಿಯನ್ನು ಬೆಳಗಾವಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ, ಬೆಳಗಾವಿಯ ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ, ಸೊಲ್ಲಾಪೂರದ ಶಿವಬಸವ ದೇವರು, ಕುಲವಳ್ಳಿಯ ಸುಕುಮಾರ ಆಶ್ರಮದ ಓಂಗುರೂಜಿ, ಗಣ್ಯರು ಲೋಕಾರ್ಪಣೆಗೊಳಿಸಿದರು.

 

error: Content is protected !!