* *ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ತುಮಕೂರು-೦೩:ಕಾಂಗ್ರೆಸ್ ಶಿಸ್ತಿನ ಪಕ್ಷ, ಕಾಂಗ್ರೆಸ್ ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ತುಮಕೂರಿನ ಬಾಲಭವನ ಆವರಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,
ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿಎಂ ಚೇರ್ ಖಾಲಿ ಇಲ್ಲ ಎಂದರು.
ಇನ್ನು ಗೃಹಲಕ್ಷ್ಮೀ ಖಾತೆಗಳು ಡಿಲೀಟ್ ಆಗಿವೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದುವರೆಗೂ ಒಂದೇ ಒಂದು ಕೂಡ ಡಿಲೀಟ್ ಆಗಿಲ್ಲ. ಯಾರು ಜಿಎಸ್ ಟಿ, ಆದಾಯ ತೆರಿಗೆ ಕಟ್ಟುತ್ತಿದ್ದಾರೆ, ಅಂತಹವರದ್ದು ಅವರು ಅಪ್ ಲೋಡ್ ಮಾಡಿದಾಗಲೇ ಡಿಲೀಟ್ ಮಾಡಿದ್ದೇವೆ. ನೋಂದಣಿ ಆದ ಬಳಿಕ ನಾವು ಡಿಲೀಟ್ ಮಾಡಿಲ್ಲ ಎಂದರು
ಎಲ್ಲಾ ಜಿಲ್ಲೆಗಳಿಗೂ 11 ನೇ ಕಂತು ಹಣ ಬಿಡುಗಡೆ ಆಗಿದ್ದು, ಶೀಘ್ರವೇ 12ನೇ ಹಾಗೂ 13ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
*ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಆಗದ ವಿಚಾರ*
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸಂಬಳ ಕೊಡಲಾಗುತ್ತದೆ. ಈ ರೀತಿಯ ಸಮಸ್ಯೆ ಆಗುತ್ತಿರುವುದು ಇದೇ ಮೊದಲಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದಾಗ ನಾವು ರಾಜ್ಯ ಸರ್ಕಾರದ ಮೊತ್ತ ಸೇರಿಸಿ ಸಂಬಳ ನೀಡಬೇಕಾಗುತ್ತದೆ. ಕೇಂದ್ರದಿಂದ ಹಣ ಇನ್ನೂ ಬಂದಿಲ್ಲ. ಈಗಾಗಲೇ ನಾವು ಮೂರು ನಾಲ್ಕು ಬಾರಿ ಪತ್ರ ಬರೆದಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಮ್ಮ ಇಲಾಖೆ ನಿರ್ದೇಶಕರು ಮೊನ್ನೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದಾರೆ. ಆದಷ್ಟು ಬೇಗ ನೀಡಲಾಗುವುದು. ಗಣಪತಿ ಹಬ್ಬದ ಒಳಗೆ ಸಂಬಳ ನೀಡುವ ಪ್ರಯತ್ನಿಸಲಾಗುವುದು ಎಂದರು.
ನಮ್ಮ ಇಲಾಖೆಯಲ್ಲಿ ಬಹಳಷ್ಟು ಯೋಜನೆಗಳಿಗೆ ಎರಡೂ ಸರ್ಕಾರದ ಅನುದಾನ ಬಳಕೆ ಆಗುತ್ತದೆ. ವಿಳಂಬ ಮೊದಲಿನಿಂದಲೂ ಆಗಿದೆ, ಇನ್ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.