ಬೆಳಗಾವಿ-೧೮: ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಮಹಾತ್ಮ ಗಾಂಧಿ ಸರ್ಕಲ್ ನಿಂದ ಗ್ರಾಮೀಣ ಕ್ಷೇತ್ರದ ಕುದ್ರೆಮನಿ ಕ್ರಾಸ್ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ ರಸ್ತೆ ಪರಿಶೀಲನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಶನಿವಾರ ರಾತ್ರಿ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿಗಳು, ರಸ್ತೆಯ ಪರಿಸ್ಥಿತಿಯನ್ನು ಸಂಪೂರ್ಣ ಪರಿಶೀಲಿಸಿದರು. ರಾಯಚೂರು – ಬಾಚಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ಹಿಂಡಲಗಾ- ಸುಳಗಾ- ತುರಮರಿ- ಬಾಚಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಲು ಪ್ರಮುಖ ರಸ್ತೆಯಾಗಿದೆ. ರಸ್ತೆ ಸಂಪೂರ್ಣ ಹಾಳಾಗಿ, ವಾಹನ ಸಂಚಾರ ಮಾಡಲಾಗದಂತಹ ಸ್ಥಿತಿ ಇರುವ ಹಿನ್ನೆಲೆಯಲ್ಲಿ ತಕ್ಷಣ ರಸ್ತೆಯನ್ನು ದುರಸ್ತಿ ಮಾಡಿ, ಜನರ ಪರದಾಟ ತಪ್ಪಿಸಬೇಕು ಎಂದು ಆದೇಶ ನೀಡಿದರು.
ಜಿಲ್ಲಾಧಿಕಾರಿಗಳೊಂದಿಗೆ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್, ಪಿ.ಡಬ್ಲ್ಯೂ.ಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೊಬರದ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಶಿಕಾಂತ್ ಕೋಳೆಕರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆಪ್ತ ಸಹಾಯಕರಾದ ಮಹಾಂತೇಶ್ ವಜ್ರಮಟ್ಟಿ ಮತ್ತು ಸೋಮು ದೊಡವಾಡಿ ಹಾಜರಿದ್ದರು.