ಬೆಳಗಾವಿ-೧೮:ಬಾತ್ರುಪದ ಮಾಸದ ಮೊದಲನೇ ಮಂಗಳವಾರ ಸಪ್ಟೆಂಬರ್ ೩ ಕ್ಕೆ ಎಲ್ಲರೂ ತಪ್ಪದೆ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಿ. ವೀರಶೈವರ ಮೂಲ ಪುರುಷ ವೀರಭದ್ರ ಸ್ವಾಮಿ. ಇಡೀ ರಾಜ್ಯ, ದೇಶ, ವಿದೇಶಗಳಲ್ಲಿಯೂ ಸಹ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಕಳೆದ 6 ವರ್ಷಗಳಿಂದ ಅದ್ಧೂರಿಯಾಗಿ ಆಚರಿಸಿಕೊಂಡು ಬಂದಿದೆ. ಈ ವರ್ಷವೂ ಎಲ್ಲರೂ ತಪ್ಪದೆ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಿ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಾಗೋಜಿಕೊಪ್ಪದ ಶ್ರೀ ಡಾ. ಶಿವಲಿಂಗ ಮುರುಗರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಭಾಗವಹಿಸಿ ವೀರಭದ್ರ ಮಹಾಸ್ವಾಮಿಯ ಜಯಂತಿಯನ್ನು ಜಾತಿ, ಮತ, ಪಂಥ, ಪಂಗಡವನ್ನು ಮೀರಿ ಎಲ್ಲರೂ ಆಚರಿಸುವ ಅವಶ್ಯಕತೆ ಇದೆ. ವೀರಶೈವ ಲಿಂಗಾಯತ ಧರ್ಮದಲ್ಲಿ ಸುಮಾರು 90 ರಷ್ಟು ಜನ ವೀರಭದ್ರೇಶ್ವರನನ್ನು ಆರಾಧಿಸುತ್ತಾರೆ. ವೀರಭದ್ರೇಶ್ವರ ಜಯಂತಿಯನ್ನು ಮನೆ ಮನೆಯಲ್ಲಿ, ದೇವಸ್ಥಾನ, ಮಠಗಳಲ್ಲಿ ವೀರಭದ್ರೇಶ್ವರ ಆಚರಿಸಿ ಎಂದ ಅವರು, ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರದೀಪ ಕಂಕಣವಾಡಿಯವರ ಪರಿಶ್ರಮ ಎಲ್ಲ ಕಡೆ ವೀರಭದ್ರೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತ ಬಂದಿದೆ ಎಂದರು.
ವೀರಭದ್ರೇಶ್ವರ ಜಯಂತಿ ಉತ್ಸವ ಸಮಿತಿಯ ರಾಜ್ಯಾಧ್ಯಕ್ಷರಾದ ಬಳ್ಳಾರಿ ಕಲ್ಯಾಣ ಮಠದ ಶ್ರೀ ಕಲ್ಯಾಣ ಮಹಾಸ್ವಾಮೀಜಿ ಅವರು ವೀರಭದ್ರೇಶ್ವರ ಜಯಂತಿ ಉತ್ಸವಕ್ಕೆ ವಿಶೇಷವಾದ ಕಾಳಜಿ ವಹಿಸಿ ಕಾರ್ಯಮಾಡುತ್ತಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.