23/12/2024
IMG-20240729-WA0007

ಬೆಳಗಾವಿ-29: ಜಿಲ್ಲೆಯಲ್ಲಿ ಅಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪ್ರತಿವರ್ಷದಂತೆ ಶಿಸ್ತು, ಸಂಭ್ರಮ ಹಾಗೂ ಅಚ್ಚುಕಟ್ಟಾಗಿ ಆಚರಿಸಲಾಗುವುದು. ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಉಪ ಸಮಿತಿಗಳು ಈ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವ ರಾಷ್ಟ್ರೀಯ ಹಬ್ಬವನ್ನು ಅಚ್ಚುಕಟ್ಟಾಗಿ ಆಚರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಶಿಷ್ಟಾಚಾರ ಹಾಗೂ ಧ್ವಜಸಂಹಿತೆಯಲ್ಲಿ ಯಾವುದೇ ಲೋಪಗಳಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸ್ವಾತಂತ್ರೋತ್ಸವದ ಪ್ರಯುಕ್ತ ನಗರದ ಪ್ರಮುಖ‌ ವೃತ್ತಗಳನ್ನು ಸ್ವಚ್ಚಗೊಳಿಸಿ ದೀಪಾಲಂಕಾರ ಮಾಡಬೇಕು. ಕಾರ್ಯಕ್ರಮದ ಆಮಂತ್ರಣ‌ ಪತ್ರಿಕೆಗಳನ್ನು ಶಿಷ್ಟಾಚಾರದ ಅನ್ವಯ ಮುದ್ರಿಸಿ ಸಾಕಷ್ಟು‌ ಮುಂಚಿತವಾಗಿ ಜನಪ್ರತಿನಿಧಿ ಹಾಗೂ ಗಣ್ಯರುಗಳಿಗೆ ತಲುಪಿಸಲು ಕ್ರಮ‌‌ವಹಿಸಬೇಕು.

ಜಿಲ್ಲಾ‌ ಕ್ರೀಡಾಂಗಣದಲ್ಲಿ ನೆರವೇರಲಿರುವ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದ ವೇದಿಕೆ‌ ಮೇಲೆ‌ ಶಿಷ್ಟಾಚಾರದ ಅನ್ವಯ ಗಣ್ಯರುಗಳಿಗೆ ಹಾಗೂ ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ ಮಾಡಬೇಕು.

ನಗರದ‌ ಕುಮಾರ‌ ಗಂಧರ್ವ ರಂಗ‌ಮಂದಿರದಲ್ಲಿ ಅಗಸ್ಟ್ 15ರ ಸಾಯಂಕಾಲ ಆಯೋಜಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಸದರಿ‌ ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು.

ಸಂಭ್ರಮದ ಸ್ವಾತಂತ್ರೋತ್ಸ ದಿನಾಚರಣೆ ಆಚರಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲ‌ ಸಮಿತಿಗಳು ಸಮನ್ವಯದೊಂದೊಗೆ ಕಾರ್ಯ ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ‌‌ ಮೊಹಮ್ಮದ್ ರೋಷ‌ನ್ ಅವರು ಸೂಚಿಸಿದರು.

ಸಭೆಯಲ್ಲಿ ಧ್ವಜ ಸಂಹಿತೆ, ಪಥ ಸಂಚಲನ ತಂಡಗಳ, ಕಾರ್ಯಕ್ರಮ ನಿರೂಪಣೆ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಶ್ರೀನಿವಾಸ್ ತಾಳೂರಕರ,
ದಲಿತ ಸಂಘಟನೆಯ ಮುಖಂಡ ಮಲ್ಲೇಶ್ ಚೌಗುಲೆ, ವಿಕಾಸ‌ ಕಲಘಟಗಿ, ಸ್ವಾತಂತ್ರ್ಯ ಯೋಧರಾದ ರಾಜೇಂದ್ರ ಕಲಘಟಗಿ, ಮುಖಂಡರಾದ ಯಲ್ಲಪ್ಪ‌ ಹುದಲಿ ಹಾಗೂ ಬಸವರಾಜ್ ಹಟ್ಟಿಗೌಡರ ಅವರು, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ಲ್ಯಾಸ್ಟಿಕ್ ಧ್ವಜ‌ಬಳಕೆ ನಿರ್ಬಂಧಿಸಬೇಕು; ಶಾಲಾ ಮಕ್ಕಳು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ‌ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

error: Content is protected !!